ಮಧುಗಿರಿ: ವಿದ್ಯಾರ್ಥಿನಿಯರ ಮೊಬೈಲ್‌ಗಳಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿ.ನಾಗಭೂಷಣ್ ಅವರನ್ನು ಅಮಾನತು ಗೊಳಿಸಲಾಗಿದೆ.
ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಗೌರವಯುತವಾಗಿ ವರ್ತಿಸದೆ ಪದೇ ಪದೇ ಅವರ ಮೊಬೈಲ್‌ಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು.
ವಿದ್ಯಾರ್ಥಿನಿಯು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವ ಸಂದರ್ಭದಲ್ಲಿ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡಿರುವುದು, ಶಾಲೆಯ ಹೆಣ್ಣು ಮಕ್ಕಳಿಗೆ ಮುಜುಗರವಾಗುವಂತೆ ಶಾಲೆಯ ಆವರಣದಲ್ಲಿ ಗಾಡಿಯ ಹಾರ್ನ್ ಮಾಡುತ್ತಿದ್ದರು.
ಈ ಆರೋಪಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಶಿಕ್ಷಕ ನಾಗಭೂಷಣ್ ತಮ್ಮ ವರ್ತನೆ ತಿದ್ದಿಕೊಳ್ಳುವುದಾಗಿ ತಿಳಿಸಿ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ. ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇವೆ. ಸದರಿ ಶಿಕ್ಷಕರನ್ನು ಇದೇ ಶಾಲೆಯಲ್ಲಿ ಮುಂದುವರಿಸಿದರೆ ತನಿಖೆಗೆ ಅಡ್ಡಿ ಉಂಟು ಮಾಡಬಹುದು. ಎಲ್ಲ ಆರೋಪಗಳು ಮೇಲ್ನೋಟಕ್ಕೆ ನೈಜ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ಶಿಕ್ಷಕರ ವಿರುದ್ಧದ ಇಲಾಖೆಯ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಕೆ.ಜಿ. ರಂಗಯ್ಯ ಆದೇಶ ಹೊರಡಿಸಿದ್ದಾರೆ.