ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಕಚೇರಿ ವೇಳೆ ಹೆಚ್ಚಿಸಿ, ಕರ್ತವ್ಯದ ದಿನಗಳನ್ನು ಕಡಿಮೆ ಮಾಡುವುದೂ ಸೇರಿ ಹಲವು ಸಲಹೆಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ 7 ನೇ ವೇತನ ಆಯೋಗಕ್ಕೆ ನೀಡಿದೆ.
ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಅವರನ್ನು ಶುಕ್ರವಾರ ಭೇಟಿ ಮಾಡಿ ಆಯೋಗ ಬಿಡುಗಡೆ ಮಾಡಿದ್ದ ಪ್ರಶ್ನಾವಳಿಗಳಿಗೆ ಸಲಹೆಗಳ ರೂಪದಲ್ಲಿ ಉತ್ತರ ನೀಡಿದ್ದಾರೆ.
ಪ್ರಮುಖ ಸಲಹೆಗಳು:
l ಕಚೇರಿ ವೇಳೆ ಬೆಳಿಗ್ಗೆ 9.30 ರಿಂದ ಸಂಜೆ 6 ರವರೆಗೆ ಮಾಡಬೇಕು. ತಿಂಗಳ ಮೊದಲ ಮತ್ತು ಮೂರನೇ ಶನಿವಾರವೂ ರಜೆ ನೀಡಬೇಕು.
l 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಚಾಲ್ತಿಯಲ್ಲಿರುವ ಶೇ 31 ರಷ್ಟು ತುಟ್ಟಿಭತ್ಯೆ ಯನ್ನು ವಿಲೀನಗೊಳಿಸಿ ಶೇ 40 ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು 01.07.2022 ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕು.
l ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸಬೇಕು, ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯ, ಕ್ರಿಯಾಶೀಲತೆ ಹೆಚ್ಚಿಸಲು ತರಬೇತಿ ನೀಡಬೇಕು.
l ಈಗ ಇರುವ 25 ಮಾಸ್ಟರ್ ವೇತನ ಶ್ರೇಣಿ ಮತ್ತು 92 ವೇತನ ಹಂತಗಳನ್ನು ಮುಂದುವರೆಸುವುದು. ಹೊಸ ವೇತನ ಶ್ರೇಣಿಗಳನ್ನು 2022 ನೇ ಸಾಲಿನ ಬೆಲೆ ಸೂಚ್ಯಂಕದ 12 ತಿಂಗಳ ಸರಾಸರಿ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸಬೇಕು.
l ಒಬ್ಬ ಸರ್ಕಾರಿ ನೌಕರನಿಗೆ ಸೇವಾ ವಧಿಯಲ್ಲಿ ಕನಿಷ್ಠ 3 ರಿಂದ 4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸು ಮಾಡು ವುದು.
l ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿಯನ್ನು ಆಧರಿಸಿ ನಗರ ಮತ್ತು ಪಟ್ಟಣ ಪ್ರದೇಶಗಳನ್ನು ಪುನರ್ವರ್ಗೀಕರಿಸು ವುದು, ಬಿಬಿಎಂಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿ ವ್ಯಾಪ್ತಿಗೆ ವಿಸ್ತರಿಸುವುದು, ಪ್ರಸ್ತುತ ಜೀವನ ನಿರ್ವಹಣೆ ಆಧಾರದ ಮೇಲೆ ಕೆಳಕಂಡ ದರದಲ್ಲಿ ಮನೆ ಬಾಡಿಗೆ ಭತ್ಯೆ ನೀಡಬೇಕು. 'ಎ' ವರ್ಗಕ್ಕೆ ಶೇ 24 ರಿಂದ ಶೇ 30, 'ಬಿ' ವರ್ಗಕ್ಕೆ ಶೇ 16 ರಿಂದ ಶೇ 20, 'ಸಿ' ವರ್ಗಕ್ಕೆ ಶೇ 8 ರಿಂದ ಶೇ 15 ಹೆಚ್ಚಿಸಬೇಕು. ಸೇರಿದಂತೆ ಇತರ ಅಂಶಗಳು ಸಲಹೆಯಲ್ಲಿವೆ.

