ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಬಡ್ತಿ ಕುರಿತ ಅಧಿಸೂಚನೆಯನ್ನು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ.
ಹೊಸ ಮಾರ್ಗಸೂಚಿ ಪ್ರಕಾರ ಮೂರು ಹುದ್ದೆಗಳಿದ್ದರೆ ಎರಡು ಹುದ್ದೆಗಳು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತು ಒಂದು ಹುದ್ದೆ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಮೀಸಲಾಗಿರುತ್ತದೆ.
ಪದೋನ್ನತಿಗೆ ಪರಿಗಣಿಸಲು ಎರಡೂ ವೃಂದದ ಶಿಕ್ಷಕರು ಕನಿಷ್ಠ 12 ವರ್ಷಗಳ ಸೇವಾವಧಿಯನ್ನು ಪೂರೈಸಿರಬೇಕು.
ನಿಯಮದಂತೆ 1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿರುವುದು ಕಡ್ಡಾಯ. ಒಂದು ವೃಂದದಲ್ಲಿ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ, ನಿಯಮಾನುಸಾರ ಇತರ ವೃಂದದ ಅರ್ಹ ಶಿಕ್ಷಕರನ್ನು ಜ್ಯೇಷ್ಠತಾ ಪಟ್ಟಿಯ ಆಧಾರದಲ್ಲಿ ಪದೋನ್ನತಿಗೆ ಪರಿಗಣಿಸಬಹುದು. ಪ್ರೌಢ ಶಾಲಾ ಶಿಕ್ಷಕರನ್ನು ಗ್ರೇಡ್-2 ವೃಂದದ ಹುದ್ದೆಗೆ ಬಡ್ತಿಗೆ ಪರಿಗಣಿಸಲಾಗುತ್ತದೆ.
2017ರಲ್ಲಿ ತಂದ ವೃಂದ ಮತ್ತು ನೇಮಕಾತಿ ನಿಯಮದಂತೆ 1ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹೊರಡಿಸಲಾಗಿತ್ತು. ಈ ಆದೇಶದ ವಿರುದ್ಧ ಶಿಕ್ಷಕರು ಹೋರಾಟ ನಡೆಸಿದ್ದರು. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2016ಕ್ಕೂ ಮೊದಲು ನೇಮಕವಾದ ಶಿಕ್ಷಕರಿಗೆ ಪೂರ್ವಾನ್ವಯ ಮಾಡಬಾರದು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದೇ ಪರಿಗಣಿಸಬೇಕು. ಅದಕ್ಕಾಗಿ ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ-2017ಕ್ಕೆ ತಿದ್ದುಪಡಿ ತಂದು ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು.

