ನಮ್ಮಲ್ಲಿ ಅನೇಕ ಮಂದಿ ಶೌಚಾಲಯಕ್ಕೆ ಹೋಗಿ ಮೊಬೈಲ್ ಫೋನ್ ಬಳಸುತ್ತಾ ದೀರ್ಘ ಸಮಯ ಅಲ್ಲಿ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ತಜ್ಞರ ಪ್ರಕಾರ, ಶೌಚಾಲಯದಲ್ಲಿ 15 ನಿಮಿಷಕ್ಕಿಂತ ಹೆಚ್ಚು ಸಮಯ ಕುಳಿತುಕೊಳ್ಳುವುದು ಮೂಲವ್ಯಾಧಿ , ಸ್ನಾಯು ದೌರ್ಬಲ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಮೊಬೈಲ್ ಬಳಕೆಯಿಂದ ಸಮಯದ ಅರಿವೇ ಇಲ್ಲದೆ ಹೆಚ್ಚು ಹೊತ್ತು ಅಲ್ಲಿ ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ತಜ್ಞ ವೈದ್ಯರು, ಶೌಚಾಲಯದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ದೇಹವು ರಕ್ತವನ್ನು ಹೃದಯಕ್ಕೆ ಮರಳಿ ಪಂಪ್ ಮಾಡಲು ಹೆಚ್ಚು ಶ್ರಮ ಪಡಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ತಜ್ಞರ ಪ್ರಕಾರ, ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗುದನಾಳದ ಮೇಲೆ ಒತ್ತಡ ಹೆಚ್ಚಾಗಿ ಮೂಲವ್ಯಾಧಿಯ ಅಪಾಯ ಹೆಚ್ಚುತ್ತದೆ. ಜೊತೆಗೆ ಮಲವಿಸರ್ಜನೆಯ ವೇಳೆ ನೋವು, ರಕ್ತಸ್ರಾವ ಮತ್ತು ಮಲಬದ್ಧತೆ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಇನ್ನು ಕೆಲವರಿಗೆ ಇದು ಕರುಳಿನ ಸಂಬಂಧಿತ ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದಾದ್ದರಿಂದ, ಮಲವಿಸರ್ಜನೆಯ ವೇಳೆ ರಕ್ತಸ್ರಾವ ಅಥವಾ ನಿರಂತರ ಅಸಹಜತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ವೈದ್ಯರು ಶೌಚಾಲಯದಲ್ಲಿ ಮೊಬೈಲ್ ಬಳಕೆಯನ್ನು ತಪ್ಪಿಸಿ, ಹೆಚ್ಚು ಸಮಯ ಕಳೆಯದಂತೆ ಎಚ್ಚರಿಕೆ ನೀಡಿದ್ದಾರೆ.

