Dailyhunt Logo
  • Light mode
    Follow system
    Dark mode
    • Play Story
    • App Story
16 ಪ್ರಮುಖ ಪ್ರಸ್ತಾವನೆಗಳು: ಮಂಗಳೂರಿನ ಕ್ಯಾಬಿನೆಟ್ ಸಭೆಯಲ್ಲಿ ಕರಾವಳಿಗೆ ಏನೇನು?

16 ಪ್ರಮುಖ ಪ್ರಸ್ತಾವನೆಗಳು: ಮಂಗಳೂರಿನ ಕ್ಯಾಬಿನೆಟ್ ಸಭೆಯಲ್ಲಿ ಕರಾವಳಿಗೆ ಏನೇನು?

AIN Kannada 2 hrs ago

ಬೆಂಗಳೂರು/ಮಂಗಳೂರು: ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಹಲವು ಪ್ರಮುಖ ಅಭಿವೃದ್ಧಿ ಪ್ರಸ್ತಾವನೆಗಳಿಗೆ ವೇದಿಕೆಯಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯ ಅಜೆಂಡಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ 16 ವಿಚಾರಗಳು ಸ್ಥಾನ ಪಡೆದಿದ್ದು, ರಸ್ತೆ, ಸೇತುವೆ, ಬಂದರು, ಪ್ರವಾಸೋದ್ಯಮ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಯೋಜನೆಗಳ ಕುರಿತು ಅಂತಿಮ ತೀರ್ಮಾನ ನಿರೀಕ್ಷಿಸಲಾಗಿದೆ.

ಕರಾವಳಿ ಭಾಗದ ಆರ್ಥಿಕ, ಸಾಮಾಜಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಸಮಗ್ರ ಅಭಿವೃದ್ಧಿ ಬ್ಲೂಪ್ರಿಂಟ್ ರೂಪಿಸುವ ಸಾಧ್ಯತೆಯಿದ್ದು, ವಿಶೇಷ ಆರ್ಥಿಕ ಪ್ಯಾಕೇಜ್ ಅಥವಾ ಹೆಚ್ಚುವರಿ ಅನುದಾನದ ನಿರೀಕ್ಷೆಯೂ ಇದೆ. ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ, ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಹಾಗೂ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ನೀಡುವ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ಬಂದರು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಲವು ದೊಡ್ಡ ಯೋಜನೆಗಳು ಅಜೆಂಡಾದಲ್ಲಿವೆ. ಉತ್ತರ ಕನ್ನಡದ ಮಂಕಿ ಬಂದರಿನಲ್ಲಿ ₹6,925 ಕೋಟಿ ವೆಚ್ಚದಲ್ಲಿ PPP-DBFOT ಮಾದರಿಯಲ್ಲಿ ಬಹುಉದ್ದೇಶಿತ ಬಂದರು ಹಾಗೂ ಹಡಗು ನಿರ್ಮಾಣ ಅಂಗಳ ನಿರ್ಮಿಸುವ ಪ್ರಸ್ತಾವನೆ ಇದರಲ್ಲಿ ಪ್ರಮುಖವಾಗಿದೆ. ಕಾರವಾರ ವಿಮಾನ ನಿಲ್ದಾಣದ ಯೋಜನಾ ವೆಚ್ಚವನ್ನು ₹98.24 ಕೋಟಿಯಿಂದ ₹250.05 ಕೋಟಿಗೆ ಹೆಚ್ಚಿಸುವ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಗೂ ಪ್ರಸ್ತಾವನೆ ಇದೆ.

ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲೂಕಿನ ಏಳು ದ್ವೀಪಗಳನ್ನು ₹307.71 ಕೋಟಿ ವೆಚ್ಚದಲ್ಲಿ ಪರಿಸರ ಸ್ನೇಹಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ, ಉಡುಪಿಯ ಅಯೋಬಾ, ದರಿಯಾ ಬಹದೂರ್‌ಗಢ ಮತ್ತು ಮಲ್ಪೆ ದ್ವೀಪಗಳನ್ನು ₹279.03 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನಾಗಿ ರೂಪಿಸುವ ಯೋಜನೆಗಳು ಸಂಪುಟದ ಮುಂದೆ ಬರಲಿವೆ.

ಮಂಗಳೂರಿನ ಗುರುಪುರ ನದಿ ದ್ವೀಪಗಳನ್ನು ₹125.43 ಕೋಟಿ ಅಂದಾಜು ವೆಚ್ಚದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಹಾಗೂ ಲೈಟ್‌ಹೌಸ್ ಸುತ್ತಲಿನ ಪ್ರದೇಶವನ್ನು ₹60.34 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೂ ಅನುಮೋದನೆ ನಿರೀಕ್ಷಿಸಲಾಗಿದೆ. ಕರ್ನಾಟಕ ಒಳನಾಡು ಹಡಗುಗಳ (ದಂಡನೆ ಮತ್ತು ಮೇಲ್ಮನವಿ) ನಿಯಮಗಳು, 2026 ಜಾರಿಗೆ ತರುವ ಪ್ರಸ್ತಾವನೆಯೂ ಅಜೆಂಡಾದಲ್ಲಿದೆ.

ಸೇತುವೆ ಮತ್ತು ರಸ್ತೆ ಯೋಜನೆಗಳ ಪೈಕಿ ಕೋಟೆಪುರ-ಬೋಳಾರ ಸಂಪರ್ಕ ರಸ್ತೆ ಹಾಗೂ ನೇತ್ರಾವತಿ ನದಿ ಸೇತುವೆಯ ಬಾಕಿ ಕಾಮಗಾರಿಗೆ ₹50 ಕೋಟಿ, ಕುಂದಾಪುರ ತಾಲೂಕಿನ ಕಂದಲೂರಿನಲ್ಲಿ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ₹55 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡುವ ಸಾಧ್ಯತೆಯಿದೆ. ಮಂಗಳೂರು-ಅತ್ಯಾಡಿ ಹೆದ್ದಾರಿಯ ಮರವುರು ಬಳಿ ₹40 ಕೋಟಿ ಹಾಗೂ ಕಟೀಲು ಬಳಿ ₹33 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೂ ಪ್ರಸ್ತಾವನೆ ಇದೆ.

ಮೂಲ್ಕಿ-ಮೂಡಬಿದ್ರೆ ವ್ಯಾಪ್ತಿಯ ಪಾಲಿಮಾರ್ ಸೇತುವೆಯನ್ನು ₹25 ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಿಸುವ ಯೋಜನೆಯೂ ಸಭೆಯ ಮುಂದಿದೆ. ಕುಡಿಯುವ ನೀರಿನ ಕ್ಷೇತ್ರದಲ್ಲಿ ಮಳವೂರು ₹11.40 ಕೋಟಿ, ಕರೋಪಾಡಿ ₹12.36 ಕೋಟಿ ಹಾಗೂ ಸಂಗಬೆಟ್ಟು ₹14.90 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ನಿರ್ವಹಣೆಗೆ ಅನುಮೋದನೆ ನಿರೀಕ್ಷಿಸಲಾಗಿದೆ.

ಗ್ರಾಮೀಣ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಂಡವಾಳ ಹೂಡಿಕೆ ವಿಶೇಷ ನೆರವು ಯೋಜನೆಯಡಿ ಹೊಸ ಗ್ರಾಮ ಗ್ರಂಥಾಲಯಗಳಿಗೆ ₹57.15 ಕೋಟಿ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸುವ ಪ್ರಸ್ತಾವನೆಯೂ ಇದೆ. ಇದೇ ವೇಳೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ಐದು ಸೆಂಟ್ಸ್ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೂ ಸಂಪುಟದ ಮುಂದೆ ಬರಲಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News