ಬೆಂಗಳೂರು: ಮೂರು ದಶಕಗಳಿಗೂ ಅಧಿಕ ಹಳೆಯ ಆಸ್ತಿ ನೋಂದಣಿ ವ್ಯವಹಾರಕ್ಕೆ ಸಂಬಂಧಿಸಿ ಕೊರತೆಯ ಮುದ್ರಾಂಕ ಶುಲ್ಕ ವಸೂಲಿಗೆ ಕಂದಾಯ ಇಲಾಖೆ ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ರದ್ದುಪಡಿಸಿದೆ. ಕಾನೂನಿನಲ್ಲಿ ನಿಗದಿಪಡಿಸಿರುವ ಕಾಲಮಿತಿ ಮೀರಿದ ಬಳಿಕ ಇಂತಹ ವಸೂಲಾತಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಬೆಳಗಾವಿಯ ಅಂಜನೇಯ ನಗರದ ನಿವಾಸಿ ರಾಜೇಶ್ವರಿ ಮುತ್ತಣ್ಣ ಬಿರಾಜ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ತೀರ್ಪಿನಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 46ಎ(1) ಅನ್ನು ಉಲ್ಲೇಖಿಸಿರುವ ನ್ಯಾಯಪೀಠ, ಮುದ್ರಾಂಕ ಶುಲ್ಕದ ಕೊರತೆಯನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಅನಿಯಮಿತ ಅಧಿಕಾರವಿಲ್ಲ ಎಂದು ಹೇಳಿದೆ. ಸಾಮಾನ್ಯವಾಗಿ ಇಂತಹ ವಸೂಲಾತಿ ಕ್ರಮವನ್ನು ಐದು ವರ್ಷಗಳೊಳಗೆ ಕೈಗೊಳ್ಳಬೇಕು. ವಂಚನೆ, ಪಿತೂರಿ ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಪ್ರಕರಣಗಳಲ್ಲಿ ಮಾತ್ರ ಈ ಅವಧಿಯನ್ನು ಗರಿಷ್ಠ 10 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ ಎಂದು ತಿಳಿಸಿದೆ.
ಆದರೆ, ಈ ಪ್ರಕರಣದಲ್ಲಿ ಸುಮಾರು 32 ವರ್ಷಗಳ ಬಳಿಕ ನೋಟಿಸ್ ಜಾರಿಗೊಳಿಸಿರುವುದು ಕಾನೂನುಬಾಹಿರವಾಗಿದ್ದು, ನಿಗದಿತ ಕಾಲಮಿತಿಯನ್ನು ಮೀರಿದ ಕ್ರಮವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಾಲಮಿತಿ ಮುಗಿದ ಬಳಿಕ ಅಧಿಕಾರಿಗಳಿಗೆ ವಸೂಲಾತಿ ಪ್ರಕ್ರಿಯೆ ಆರಂಭಿಸುವ ಅಧಿಕಾರವೇ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೊರಡಿಸಲಾದ ನೋಟಿಸ್‌ಗಳು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಇದೇ ವೇಳೆ, ಅರ್ಜಿದಾರರು 1993ರ ಮೂಲ ಆಸ್ತಿ ವ್ಯವಹಾರದ ನೇರ ಫಲಾನುಭವಿಯಲ್ಲ. ನಂತರದ ಅವಧಿಯಲ್ಲಿ ಆಸ್ತಿಯನ್ನು ಖರೀದಿಸಿದ ಮುಗ್ಧ ಖರೀದಿದಾರರಾಗಿರುವ ಹಿನ್ನೆಲೆಯಲ್ಲಿ, ಮೂರು ದಶಕಗಳ ಹಿಂದೆ ಮಾರಾಟಗಾರರಿಂದ ನಡೆದಿರಬಹುದಾದ ತಪ್ಪಿನ ಹೊಣೆಯನ್ನು ಈಗಿನ ಖರೀದಿದಾರರ ಮೇಲೆ ಹೊರಿಸುವುದು ನೋಂದಾಯಿತ ಆಸ್ತಿ ವ್ಯವಹಾರಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರ ವ್ಯಾಪ್ತಿ ಮೀರಿ ನೀಡಲಾಗಿದ್ದ ನೋಟಿಸ್ ಅನ್ನು ರದ್ದುಗೊಳಿಸಿರುವ ಹೈಕೋರ್ಟ್, ಮುದ್ರಾಂಕ ಶುಲ್ಕ ಬಾಕಿ ಕುರಿತು ಆಸ್ತಿಯ ದಾಖಲೆಗಳಲ್ಲಿ ಮಾಡಲಾಗಿದ್ದ ನಮೂದನ್ನೂ ರದ್ದುಪಡಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಆಸ್ತಿಗೆ ಸಂಬಂಧಿಸಿದ ಮಾರಾಟ ಪತ್ರವು 1993ರ ಮೇ 15ರಂದು ನೋಂದಣಿಯಾಗಿತ್ತು. ಬಳಿಕ ಸುಮಾರು 32 ವರ್ಷಗಳ ನಂತರ, 2025ರ ಮಾರ್ಚ್ 20ರಂದು ಬೆಳಗಾವಿ ತಹಶೀಲ್ದಾರ್ ಕೊರತೆಯ ಮುದ್ರಾಂಕ ಶುಲ್ಕ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿದ್ದರು. ಇದರ ಆಧಾರದಲ್ಲಿ ಭೂ ದಾಖಲೆಗಳ ಇಲಾಖೆಯು ಆಸ್ತಿ ದಾಖಲೆಗಳಲ್ಲಿ ಸಂಬಂಧಿತ ನಮೂದು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ರಾಜೇಶ್ವರಿ ಮುತ್ತಣ್ಣ ಬಿರಾಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

