Dailyhunt Logo
  • Light mode
    Follow system
    Dark mode
    • Play Story
    • App Story
₹450 ಕೋಟಿ ವೆಚ್ಚದ ಜಾತಿ ಸಮೀಕ್ಷೆ ವರದಿ ಕುರಿತು ಸರ್ಕಾರ ನಿಲುವು ಸ್ಪಷ್ಟಪಡಿಸಲಿ: ವಿ. ಸುನೀಲ್ ಕುಮಾರ್

₹450 ಕೋಟಿ ವೆಚ್ಚದ ಜಾತಿ ಸಮೀಕ್ಷೆ ವರದಿ ಕುರಿತು ಸರ್ಕಾರ ನಿಲುವು ಸ್ಪಷ್ಟಪಡಿಸಲಿ: ವಿ. ಸುನೀಲ್ ಕುಮಾರ್

AIN Kannada 4 months ago

ಬೆಂಗಳೂರು: ಕರ್ನಾಟಕ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಕುರಿತು ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿಲುವು ಪ್ರಕಟಿಸಿ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ವರದಿಯನ್ನು ಮಂಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಸಿದ್ಧಗೊಂಡಿರುವ ವರದಿ ಕುರಿತು ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.

"ಸುಮಾರು ₹450 ಕೋಟಿಗೂ ಹೆಚ್ಚು ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡಿ ನಡೆಸಿರುವ ಸಮೀಕ್ಷೆಯ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಈ ವಿಷಯದ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆಗೆ ಸಮಯ ನಿಗದಿಪಡಿಸಬೇಕು. ವರದಿಯಲ್ಲಿ ಏನಿದೆ ಎಂಬುದನ್ನು ರಾಜ್ಯದ ಜನತೆ ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ" ಎಂದು ಅವರು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ (ಒಬಿಸಿ) ಪರ ಮಾತನಾಡುವುದಾಗಿ ಹೇಳಿಕೊಳ್ಳುವ ಸರ್ಕಾರ, ರಾಜ್ಯಪಾಲರ ಭಾಷಣದಲ್ಲಾಗಲಿ ಅಥವಾ ಬಜೆಟ್‌ನಲ್ಲಾಗಲಿ ಜಾತಿ ಸಮೀಕ್ಷೆ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಆರೋಪಿಸಿದ ಅವರು, ಹೊರಗೆ ಅಹಿಂದ ಹಾಗೂ ಒಬಿಸಿ ಪರ ಎಂದು ಹೇಳಿಕೊಳ್ಳುವ ಸರ್ಕಾರ, ಅಧಿಕೃತ ದಾಖಲೆಗಳಲ್ಲಿ ಅದರ ಪ್ರತಿಫಲನ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶಗಳ ಆಧಾರವಿಲ್ಲದೆ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸರ್ಕಾರ ಘೋಷಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಮಧುಸೂದನ್ ನಾಯಕ್ ವರದಿಯನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ ಸುನೀಲ್ ಕುಮಾರ್, ಈ ಹಿಂದೆ ಕಾಂತರಾಜು ವರದಿಯನ್ನೂ ಸರ್ಕಾರ ಸ್ವೀಕರಿಸಿರಲಿಲ್ಲ. ಬಳಿಕ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸಂಪುಟದ ಮುಂದೆ ತಂದಾಗಲೂ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಸಾರ್ವಜನಿಕಗೊಳಿಸಲು ಹಿಂದೇಟು ಹಾಕಲಾಯಿತು ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಕೈಬಿಡಲಾಯಿತು ಎಂದು ಆರೋಪಿಸಿದ ಅವರು, ಇದೀಗ ಮಧುಸೂದನ್ ನಾಯಕ್ ವರದಿಯನ್ನೂ ಇದೇ ಸರ್ಕಾರ ಕಡೆಗಣಿಸುವ ಸಾಧ್ಯತೆ ಇದೆ ಎಂದು ವ್ಯಂಗ್ಯವಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: AIN Live News