ರಾಮ್ ಚರಣ್ ನಟನೆಯ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ನಡುವೆ, ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ತಾಂತ್ರಿಕವಾಗಿ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಸಿನಿಮಾದ ಕೆಲವು ದೃಶ್ಯಗಳನ್ನು ಬರೋಬ್ಬರಿ ಅರ್ಧ ಶತಮಾನ ಹಳೆಯ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದೆ ಎಂದು ಖ್ಯಾತ ಸಿನಿಮಾಟೊಗ್ರಾಫರ್ ಆರ್.
ರತ್ನವೇಲು ಬಹಿರಂಗಪಡಿಸಿದ್ದಾರೆ.
ಗ್ರಾಮೀಣ ಹಿನ್ನೆಲೆಯ ಯುವಕನೊಬ್ಬ ಕ್ರಿಕೆಟಿಗನಿಂದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿ ಬೆಳೆದು ದೇಶವನ್ನು ಪ್ರತಿನಿಧಿಸುವ ಕಥಾಹಂದರ ಹೊಂದಿರುವ 'ಪೆದ್ದಿ' ಸಿನಿಮಾದಲ್ಲಿ ಕಾಲಘಟ್ಟದ ನೈಜತೆಯನ್ನು ಮೂಡಿಸಲು ವಿಶೇಷ ಪ್ರಯೋಗ ಮಾಡಲಾಗಿದೆ. ದೃಶ್ಯಗಳಿಗೆ ಹಳೆಯ ಕಾಲದ ನೈಜ ಫೀಲ್ ನೀಡುವ ಉದ್ದೇಶದಿಂದ ಚಿತ್ರದ ಕೆಲವು ಭಾಗಗಳನ್ನು ಹಳೆಯ ನೆಗೆಟಿವ್ ಫಿಲಂ ಹಾಗೂ ವಿಂಟೇಜ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ರತ್ನವೇಲು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, 'ಪೆದ್ದಿ' ಸಿನಿಮಾಕ್ಕೆ ಕೆಲಸ ಮಾಡಲು ತಮ್ಮನ್ನು ಖುದ್ದು ರಾಮ್ ಚರಣ್ ಆಹ್ವಾನಿಸಿದ್ದರು ಎಂದು ತಿಳಿಸಿದ್ದಾರೆ. ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಕಥೆ ಹೇಳಿದಾಗ ಅದರ ತೀವ್ರತೆ ಮತ್ತು ಭಾವನಾತ್ಮಕ ಜರ್ನಿ ತಮ್ಮನ್ನು ಸೆಳೆದ ಕಾರಣ ಈ ಪ್ರಾಜೆಕ್ಟ್ ಒಪ್ಪಿಕೊಂಡೆ ಎಂದಿದ್ದಾರೆ.
ಸಿನಿಮಾದ ಕಥೆ ಹಲವು ಕಾಲಘಟ್ಟಗಳಲ್ಲಿ ಸಾಗುವುದರಿಂದ, ಕೆಲವು ದೃಶ್ಯಗಳಿಗೆ ಡಿಜಿಟಲ್ ಬದಲಾಗಿ ಪುರಾತನ ನೆಗೆಟಿವ್ ತಂತ್ರಜ್ಞಾನ ಬಳಸಿ ಶೂಟ್ ಮಾಡಲಾಗಿದೆ. ಇದು ಕೇವಲ ಸ್ಟೈಲ್‌ಗಾಗಿ ಅಲ್ಲ, ಕಥೆಯ ಆತ್ಮವನ್ನು ನೈಜವಾಗಿ ಕಟ್ಟಿಕೊಡಲು ಮಾಡಿದ ಪ್ರಯೋಗ ಎಂದು ರತ್ನವೇಲು ವಿವರಿಸಿದ್ದಾರೆ.
'ಪೆದ್ದಿ' ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಜಾನ್ಹವಿ ಕಪೂರ್, ಶಿವರಾಜ್ ಕುಮಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗ ನಟಿಸಿದೆ. ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಈಗಾಗಲೇ ಭಾರಿ ನಿರೀಕ್ಷೆ ನಿರ್ಮಾಣವಾಗಿದೆ.

