Dailyhunt Logo
  • Light mode
    Follow system
    Dark mode
    • Play Story
    • App Story
ಅಡ್ಡಮತದಾನಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ? ಬಿಜೆಪಿ ನಿರ್ಧಾರಕ್ಕೆ ಸುರೇಶ್ ಕುಮಾರ್ ವಿರೋಧ

ಅಡ್ಡಮತದಾನಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ? ಬಿಜೆಪಿ ನಿರ್ಧಾರಕ್ಕೆ ಸುರೇಶ್ ಕುಮಾರ್ ವಿರೋಧ

AIN Kannada 12 hrs ago

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರಿಂದ ಅಡ್ಡಮತದಾನ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.

ಎರಡೂ ಪಕ್ಷಗಳ ಒಟ್ಟು 11 ಮತಗಳು ಕಾಂಗ್ರೆಸ್ ಅಭ್ಯರ್ಥಿಗಳ ಪರ ಚಲಾಯಿಸಲ್ಪಟ್ಟಿವೆ ಎಂಬ ಮಾಹಿತಿ ಹೊರಬಿದ್ದಿದ್ದು, ಅಡ್ಡಮತದಾನ ಮಾಡಿದವರ ಪತ್ತೆಗೆ ಬಿಜೆಪಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಅಡ್ಡಮತದಾನ ಮಾಡಿದವರನ್ನು ಗುರುತಿಸುವ ಉದ್ದೇಶದಿಂದ ಮುಂದಿನ ವಾರ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಯಲ್ಲಿ ಶಾಸಕರಿಂದ "ನಾನು ಅಡ್ಡಮತದಾನ ಮಾಡಿಲ್ಲ" ಎಂದು ಶ್ರೀ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಆಣೆ-ಪ್ರಮಾಣ ಮಾಡಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಆದರೆ ಈ ನಿರ್ಧಾರಕ್ಕೆ ಬಿಜೆಪಿ ಹಿರಿಯ ಶಾಸಕ ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನು ರಾಜಕೀಯ ವಿಚಾರಗಳಿಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ದಿಗ್ಭ್ರಮೆ ಉಂಟು ಮಾಡಿದೆ. ಶ್ರೀಕ್ಷೇತ್ರ ಧರ್ಮಸ್ಥಳ ತನ್ನದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕೀಯದಲ್ಲಿ ನಡೆದಿರುವ ಅಡ್ಡಮತದಾನದಂತಹ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ಬೇಡ" ಎಂದು ಅವರು ಸಲಹೆ ನೀಡಿದ್ದಾರೆ.

ಅಲ್ಲದೆ, ಅಡ್ಡಮತದಾನ ಮಾಡಿದವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ ಎಂದು ಕಿಡಿಕಾರಿರುವ ಅವರು, ತಪ್ಪು ಮಾಡಿದವರು ದೇವರ ಸನ್ನಿಧಾನದಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ತಮ್ಮ ನೈತಿಕ ದಿವಾಳಿತನವನ್ನು ಮತ್ತಷ್ಟು ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರ ಸಲಹೆ ಕುರಿತು ಪಕ್ಷದೊಳಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಕೆಲ ಬಿಜೆಪಿ ಶಾಸಕರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ಪ್ರಸ್ತಾವನೆಯನ್ನು ಸ್ವಾಗತಿಸಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನ ಪ್ರಕರಣ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, ಶಾಸಕರ ನಡುವೆ ಪರಸ್ಪರ ಅನುಮಾನಗಳ ವಾತಾವರಣ ನಿರ್ಮಾಣವಾಗಿದೆ. ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಬಿಜೆಪಿ ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News