ನವದೆಹಲಿ: ಖಾಸಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಜೆ ಪಡೆಯುವುದು ಎಷ್ಟು ಕಷ್ಟ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದೀಗ ಜ್ವರದ ಕಾರಣ ರಜೆ ಕೇಳಿದ ಉದ್ಯೋಗಿನಿಗೆ ಮ್ಯಾನೇಜರ್ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಅದಕ್ಕೆ ಯುವತಿ ನೀಡಿದ ಖಡಕ್ ಪ್ರತಿಕ್ರಿಯೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
'ವಾಟ್ ಎವರ್ ವಿಶಾಲ್' ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಾಟ್ಸ್‌ಆಪ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ನಲ್ಲಿ, ಉದ್ಯೋಗಿನಿ ತಾನು ಜ್ವರದಿಂದ ಬಳಲುತ್ತಿರುವ ಕಾರಣ ಕಚೇರಿಗೆ ಬರಲು ಸಾಧ್ಯವಿಲ್ಲ ಎಂದು ಮ್ಯಾನೇಜರ್‌ಗೆ ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್, "ಆಫೀಸ್‌ಗೆ ಬನ್ನಿ, ಇಬ್ಬರೂ ಸೇರಿ ವೈದ್ಯರ ಬಳಿ ಹೋಗಿ ಔಷಧಿ ತೆಗೆದುಕೊಂಡು ಬರೋಣ" ಎಂದು ಉತ್ತರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉದ್ಯೋಗಿನಿ, "ಜ್ವರ ತೀವ್ರವಾಗಿಲ್ಲ. ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಂಡಿದ್ದೇನೆ. ವಿಶ್ರಾಂತಿ ಮಾಡಿದರೆ ಗುಣವಾಗುತ್ತದೆ" ಎಂದು ತಿಳಿಸಿದ್ದಾಳೆ. ಆದರೆ, ಅನಾರೋಗ್ಯದ ರಜೆ ಪಡೆಯುವ ಪ್ರತಿಯೊಬ್ಬರೂ ವೈದ್ಯರ ಪ್ರಿಸ್ಕ್ರಿಪ್ಷನ್ ಸಲ್ಲಿಸಬೇಕು ಎಂದು ಕಂಪನಿಯ ನಿರ್ದೇಶಕರು ಸೂಚಿಸಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದಾನೆ.
ಇದಕ್ಕೆ ಖಡಕ್ ಉತ್ತರ ನೀಡಿರುವ ಯುವತಿ, "ನಾನು ಶಾಲಾ ವಿದ್ಯಾರ್ಥಿನಿಯಲ್ಲ. ನನ್ನ ಬಳಿ ಇನ್ನೂ ಬಳಸದೇ ಉಳಿದಿರುವ ರಜೆಗಳಿವೆ. ಅವನ್ನೇ ಬಳಸುತ್ತಿದ್ದೇನೆ. ನಿರ್ದೇಶಕರು ಅಷ್ಟು ದೊಡ್ಡ ವೈದ್ಯರಾಗಿದ್ದರೆ ನನ್ನ ಹೆಸರಿಗೆ ಅವರೇ ಪ್ರಿಸ್ಕ್ರಿಪ್ಷನ್ ಬರೆದು ಕೊಡಲಿ. ನನ್ನ ಬಳಿ ವೈದ್ಯರ ಚೀಟಿಯೂ ಇಲ್ಲ, ಪೋಷಕರ ಸಹಿ ಇರುವ ರಜಾ ಅರ್ಜಿಯೂ ಇಲ್ಲ. ನಾನು ಈಗ ವಿಶ್ರಾಂತಿ ಪಡೆಯುತ್ತೇನೆ" ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾಳೆ.
ಈ ವಾಟ್ಸ್‌ಆಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅನೇಕ ನೆಟ್ಟಿಗರು ಉದ್ಯೋಗಿನಿಯ ಪರವಾಗಿ ಪ್ರತಿಕ್ರಿಯಿಸಿದ್ದು, "ರಜೆ ಕೇಳಿದಾಗ ಕೆಲವು ಮ್ಯಾನೇಜರ್‌ಗಳ ವರ್ತನೆ ಮಿತಿಮೀರಿರುತ್ತದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಅನಾರೋಗ್ಯದಲ್ಲಿರುವ ಉದ್ಯೋಗಿಗೆ ರಜೆ ನೀಡದೆ ವೈದ್ಯರ ಚೀಟಿ ಕೇಳುವುದು ಸರಿಯಲ್ಲ. ಇಂತಹ ಕಾರ್ಯಸಂಸ್ಕೃತಿ ಬದಲಾಗಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು, "ಯುವತಿ ಧೈರ್ಯವಾಗಿ ತನ್ನ ಹಕ್ಕಿನ ಮಾತು ಹೇಳಿದ್ದಾಳೆ. ಇಂತಹ ಸಂದರ್ಭಗಳಲ್ಲಿ ಉದ್ಯೋಗಿಗಳು ಸ್ಪಷ್ಟವಾಗಿ ಪ್ರತಿಕ್ರಿಯಿಸುವುದು ಅಗತ್ಯ" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

