ಕೊಪ್ಪಳ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪದಿಂದ ಭಕ್ತರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ಮುಂದೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಹಾಗೂ ಸಂಜೆ 4 ಗಂಟೆಯ ಬಳಿಕ ಮಾತ್ರ ಭಕ್ತರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 11 ರಿಂದ ಸಂಜೆ 4ರವರೆಗೆ ಬೆಟ್ಟ ಏರುವುದನ್ನು ನಿಷೇಧಿಸಲಾಗಿದೆ.
ಹನುಮಪ್ಪನ ದರ್ಶನಕ್ಕಾಗಿ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸುಮಾರು 575 ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯಬೇಕಿರುವುದರಿಂದ ಬಿಸಿಲಿನ ತೀವ್ರತೆ ಹೆಚ್ಚಿದಂತೆ ಭಕ್ತರಲ್ಲಿ ನಿರ್ಜಲೀಕರಣ ಮತ್ತು ಸುಸ್ತು ಕಾಣಿಸಿಕೊಳ್ಳುತ್ತಿದೆ. ಕೆಲವರು ಮೆಟ್ಟಿಲುಗಳ ಮೇಲೆಯೇ ಕುಸಿದು ಬೀಳುತ್ತಿರುವ ಘಟನೆಗಳೂ ವರದಿಯಾಗಿವೆ.
ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಜಾರಿಗೆ ತಂದಿದ್ದಾರೆ. ಸಂಜೆ 4 ಗಂಟೆಯ ನಂತರ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದು, ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಬೆಟ್ಟದ ಮೇಲೂ ನಿಯೋಜಿಸುವಂತೆ ಮನವಿ ಮಾಡಿದ್ದಾರೆ. ಬೇಸಿಗೆಯ ತೀವ್ರತೆ ಕಡಿಮೆಯಾಗುವವರೆಗೆ ಭಕ್ತರು ನಿಗದಿತ ಸಮಯವನ್ನು ಪಾಲಿಸುವುದು ಅನಿವಾರ್ಯವಾಗಿದೆ.

