ಬೆಂಗಳೂರು: ತಲಘಟ್ಟಪುರದಲ್ಲಿ ತಾಯಿಯೊಬ್ಬರು ತಮ್ಮ ಎರಡು ಮಕ್ಕಳನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ವೆಸ್ಟ್ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ. ಪೋಸ್ಟ್ ಡೆಲಿವರಿ ಡಿಪ್ರೆಷನ್ (ಹೆರಿಗೆ ನಂತರದ ಖಿನ್ನತೆ) ಕಾರಣದಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ರಾಮಲಿಂಗಪ್ಪ ಹಾಗೂ ಉಮಾದೇವಿ ಅವರಿಗೆ 24 ವರ್ಷಗಳ ಹಿಂದೆ ವಿವಾಹವಾಗಿದ್ದು, ಇತ್ತೀಚೆಗೆ ಐವಿಎಫ್ ಚಿಕಿತ್ಸೆಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಈ ಸಂಬಂಧ ರಾಮಲಿಂಗಪ್ಪ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಪತ್ನಿ ಅವಳಿ ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ಉಮಾದೇವಿ ಅವರು ಪೋಸ್ಟ್ ಡೆಲಿವರಿ ಡಿಪ್ರೆಷನ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಉಮಾದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

