Dailyhunt Logo
  • Light mode
    Follow system
    Dark mode
    • Play Story
    • App Story
ಬಾಲಿವುಡ್‌ಗೆ ಗುಡ್‌ಬೈ ಹೇಳಿದ ಮಹೇಶ್ ಭಟ್! ಇನ್ನು ಮುಂದೆ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದ ಹಿರಿಯ ನಿರ್ದೇಶಕ

ಬಾಲಿವುಡ್‌ಗೆ ಗುಡ್‌ಬೈ ಹೇಳಿದ ಮಹೇಶ್ ಭಟ್! ಇನ್ನು ಮುಂದೆ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದ ಹಿರಿಯ ನಿರ್ದೇಶಕ

AIN Kannada 1 week ago

ಮುಂಬೈ, ಜುಲೈ 02: ಬಾಲಿವುಡ್‌ನ ಹಿರಿಯ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ. ಇನ್ನು ಮುಂದೆ ಯಾವುದೇ ಸಿನಿಮಾವನ್ನು ನಿರ್ದೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ಜೀವನದ ಮುಂದಿನ ಹಂತವನ್ನು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದಕ್ಕೆ ಮೀಸಲಿಡುವುದಾಗಿ ತಿಳಿಸಿದ್ದಾರೆ.

'ಅರ್ಥ್', 'ಸಾರಂಶ್', 'ನಾಮ್', 'ದಿಲ್ ಹೈ ಕಿ ಮಾಂತಾ ನಹೀ', 'ಸಡಕ್' ಸೇರಿದಂತೆ ಹಲವು ಕ್ಲಾಸಿಕ್ ಹಾಗೂ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿರುವ ಮಹೇಶ್ ಭಟ್, ಇಂದಿನ ಸಿನಿಮಾ ನಿರ್ಮಾಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರ ಪ್ರಕಾರ, ಇಂದಿನ ಸಿನಿಮಾ ಕ್ಷೇತ್ರದಲ್ಲಿ ಕಥೆ, ಕಂಟೆಂಟ್ ಮತ್ತು ಮಾರುಕಟ್ಟೆ ತಂತ್ರಗಳು ಮೊದಲೇ ನಿರ್ಧಾರವಾಗುತ್ತವೆ. ಬರವಣಿಗೆ ಆರಂಭಕ್ಕೂ ಮುನ್ನವೇ ಚಿತ್ರದ ಸ್ವರೂಪ ನಿಗದಿಯಾಗುವುದರಿಂದ ನಿರ್ದೇಶಕರ ಸೃಜನಶೀಲತೆಗೆ ಅವಕಾಶ ಕಡಿಮೆಯಾಗಿದೆ. ಈ ಕಾರಣದಿಂದಲೇ ನಿರ್ದೇಶನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ.

1999ರಲ್ಲಿ ಬಿಡುಗಡೆಯಾದ 'ಕಾರ್ತೂಸ್' ಚಿತ್ರದ ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದ ಮಹೇಶ್ ಭಟ್, ಸುಮಾರು ಎರಡು ದಶಕಗಳ ನಂತರ 2020ರಲ್ಲಿ 'ಸಡಕ್ 2' ಮೂಲಕ ಮತ್ತೆ ನಿರ್ದೇಶಕರ ಕುರ್ಚಿಗೆ ಮರಳಿದ್ದರು. ಆದರೆ ಅದೇ ತಮ್ಮ ಕೊನೆಯ ಸಿನಿಮಾ ಎಂದು ಇದೀಗ ಅಧಿಕೃತವಾಗಿ ಘೋಷಿಸಿದ್ದಾರೆ.

ಐದು ದಶಕಗಳ ಸಿನಿ ಪಯಣದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಮಹೇಶ್ ಭಟ್, ಭಾವನಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳ ಮೂಲಕ ವಿಭಿನ್ನ ಗುರುತನ್ನು ಮೂಡಿಸಿದ್ದರು. ಈಗ ತಮ್ಮ ಅನುಭವವನ್ನು ಹೊಸ ನಿರ್ದೇಶಕರು ಮತ್ತು ಪ್ರತಿಭಾವಂತರಿಗೆ ಹಂಚಿಕೊಳ್ಳುವುದೇ ತಮ್ಮ ಮುಂದಿನ ಗುರಿ ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News