ಬೆಂಗಳೂರು: ಆರೋಪಿಗಳ ವಿರುದ್ಧ 'ಬಲವಂತದ ಕ್ರಮ ಕೈಗೊಳ್ಳಬಾರದು' ಎಂಬ ನ್ಯಾಯಾಲಯದ ಮಧ್ಯಂತರ ಆದೇಶವು ವ್ಯಕ್ತಿಯನ್ನು ಬಂಧನ ಅಥವಾ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಕ್ರಮಗಳಿಂದ ಮಾತ್ರ ರಕ್ಷಿಸುತ್ತದೆ. ಆದರೆ, ತನಿಖೆ ಮುಂದುವರಿಸುವುದು, ಸಾಕ್ಷ್ಯ ಸಂಗ್ರಹಿಸುವುದು ಅಥವಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಾನೂನುಬದ್ಧ ಕ್ರಮಗಳಿಗೆ ಅದು ತಡೆಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.
ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿ ರುವುದನ್ನು ಪ್ರಶ್ನಿಸಿ ತಮಿಳುನಾಡು ಮೂಲದ ಕಂಪನಿಯ ನಿರ್ದೇಶಕಿ ಪವಿತ್ರ ರಾಮಾನುಜಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಈ ಆದೇಶ ನೀಡಿದೆ.
ಈ ಹಿಂದೆ ತನಿಖೆಗೆ ಸಹಕರಿಸುವ ಷರತ್ತಿನ ಮೇರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ, ಬಳಿಕ ಇಡಿ ಆಸ್ತಿಯನ್ನು ಜಪ್ತಿ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿದಾರೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವೇಳೆ ನ್ಯಾಯಾಲಯ, 'ಬಲವಂತದ ಕ್ರಮ ಬೇಡ' ಎಂಬ ಆದೇಶವು ಬಂಧನ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ನೇರ ಕ್ರಮಗಳಿಗೆ ಮಾತ್ರ ಅನ್ವಯಿಸುತ್ತದೆ. ಅದು ತನಿಖೆ ನಡೆಸುವುದನ್ನು, ಸಾಕ್ಷ್ಯ ಸಂಗ್ರಹಿಸುವುದನ್ನು, ಪ್ರಾಸಿಕ್ಯೂಷನ್ ದೂರು ಸಲ್ಲಿಸುವುದನ್ನು ಅಥವಾ ಕಾನೂನಿನ ಪ್ರಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪವಿತ್ರ ರಾಮಾನುಜಂ ವಿರುದ್ಧ ಸುಮಾರು 7.9 ಕೋಟಿ ರೂಪಾಯಿ ಹಣ ದುರ್ಬಳಕೆ ಆರೋಪ ದಾಖಲಿಸಿ ಇಸಿಐಆರ್ (ECIR) ದಾಖಲಿಸಿತ್ತು. ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ಇಡಿ ಕ್ರಮವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರೆ ತನಿಖೆಗೆ ಸಹಕರಿಸುವುದಾಗಿ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು. ಆದರೆ, ಅದೇ ಅವಧಿಯಲ್ಲಿ ಇಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಅದನ್ನು ಪ್ರಶ್ನಿಸಿ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಇಡಿ ಕೈಗೊಂಡಿರುವ ಕ್ರಮ ಕಾನೂನುಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

