Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿಗೆ ಶಿಫ್ಟ್ ಆದ ಐಟಿ ಉದ್ಯೋಗಿಗೆ ಕಂಪನಿಯಿಂದ ಭರ್ಜರಿ ಆತಿಥ್ಯ: 21 ದಿನಗಳ ಕಾಲ 5 ಸ್ಟಾರ್ ಹೋಟೆಲ್ʼನಲ್ಲಿ ಐಷಾರಾಮಿ ವಾಸ!

ಬೆಂಗಳೂರಿಗೆ ಶಿಫ್ಟ್ ಆದ ಐಟಿ ಉದ್ಯೋಗಿಗೆ ಕಂಪನಿಯಿಂದ ಭರ್ಜರಿ ಆತಿಥ್ಯ: 21 ದಿನಗಳ ಕಾಲ 5 ಸ್ಟಾರ್ ಹೋಟೆಲ್ʼನಲ್ಲಿ ಐಷಾರಾಮಿ ವಾಸ!

AIN Kannada 4 days ago

ಟಿ ಹಾಗೂ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವವರು ಉದ್ಯೋಗದ ನಿಮಿತ್ತ ಬೇರೆ ನಗರಗಳಿಗೆ ಸ್ಥಳಾಂತರ ಗೊಂಡಾಗ ಆರಂಭಿಕ ದಿನಗಳಲ್ಲಿ ಸೂಕ್ತ ಮನೆ ಹುಡುಕುವುದು ದೊಡ್ಡ ಸವಾಲಾಗಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುತ್ತವೆ.

ಇದೀಗ ಬೆಂಗಳೂರಿನಲ್ಲಿ ದಂಪತಿಗೆ ಕಂಪನಿಯೊಂದು ಒದಗಿಸಿದ ಐಷಾರಾಮಿ ವಾಸ್ತವ್ಯದ ಅನುಭವ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಶಿವಾಂಗಿ ಮತ್ತು ಅವರ ಪತಿ ಮನುಜ್ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಈ ಸಂದರ್ಭದಲ್ಲಿ ಪತಿಯ ಕಂಪನಿಯು ಅವರಿಗೆ ನಗರದ ಪ್ರತಿಷ್ಠಿತ ದಿ ಲೀಲಾ ಪ್ಯಾಲೇಸ್ನಲ್ಲಿ 21 ದಿನಗಳ ವಾಸ್ತವ್ಯದ ವ್ಯವಸ್ಥೆ ಮಾಡಿತ್ತು ಎಂದು ಅವರು ಹಂಚಿಕೊಂಡಿದ್ದಾರೆ.

ದಂಪತಿ ಹೋಟೆಲ್‌ನ ಐಷಾರಾಮಿ 'ಟವರ್ ಸೂಟ್'ನಲ್ಲಿ ತಂಗಿದ್ದು, ಅಲ್ಲಿನ ಸೌಲಭ್ಯಗಳು ಮತ್ತು ಆತಿಥ್ಯದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ.

ಟವರ್ ಸೂಟ್‌ನಲ್ಲಿ ವಿಶಾಲವಾದ ಲಿವಿಂಗ್ ರೂಮ್, ಮರದ ನೆಲಹಾಸು, ಆರಾಮದಾಯಕ ಸೋಫಾಗಳು, ವುಡನ್ ಟೇಬಲ್, ಕಾರ್ಪೆಟ್ ಹಾಗೂ ಆಕರ್ಷಕ ಲೈಟಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರ ಜೊತೆಗೆ ಸಂಪೂರ್ಣ ಸುಸಜ್ಜಿತ ಅಡುಗೆಮನೆ, ಮೈಕ್ರೋವೇವ್, ರೆಫ್ರಿಜರೇಟರ್ ಹಾಗೂ ವಾಷಿಂಗ್ ಮೆಷಿನ್ ಕೂಡ ಲಭ್ಯವಿದೆ ಎಂದು ಶಿವಾಂಗಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಶೈಲಿಯ 'ಫೋರ್-ಪೋಸ್ಟರ್ ಬೆಡ್', ಕಚೇರಿ ಕೆಲಸಕ್ಕಾಗಿ ಪ್ರತ್ಯೇಕ ವರ್ಕ್‌ಸ್ಟೇಷನ್ ಹಾಗೂ ಖಾಸಗಿ ಬಾಲ್ಕನಿಯಂತಹ ಸೌಲಭ್ಯಗಳೂ ಈ ಸೂಟ್‌ನಲ್ಲಿವೆ. ಅಲ್ಲದೆ, ಉಚಿತ ಉಪಾಹಾರ ಬಫೆ, ಈವ್ನಿಂಗ್ ಕಾಕ್ಟೈಲ್ ಅವರ್ಸ್ ಮತ್ತು ಹೈ ಟೀ ಸೇವೆಯನ್ನೂ ದಂಪತಿ ಪಡೆದುಕೊಂಡಿದ್ದಾರೆ.

ಹೋಟೆಲ್ ಸಿಬ್ಬಂದಿಯ ಆತಿಥ್ಯವನ್ನೂ ಶಿವಾಂಗಿ ವಿಶೇಷವಾಗಿ ಶ್ಲಾಘಿಸಿದ್ದಾರೆ. ತಾವು ಹೊರಗೆ ತೆರಳಿ ವಾಪಸ್ ಬಂದಾಗಲೆಲ್ಲಾ ಕೊಠಡಿಯನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಸಿಬ್ಬಂದಿ ಸಣ್ಣಪುಟ್ಟ ಅಚ್ಚರಿಗಳು ಮತ್ತು ಸಿಹಿ ತಿನಿಸುಗಳನ್ನು ಇಡುತ್ತಿದ್ದರು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ದಿ ಲೀಲಾ ಪ್ಯಾಲೇಸ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಈ ಟವರ್ ಸೂಟ್‌ನಲ್ಲಿ ಒಂದು ರಾತ್ರಿ ತಂಗಲು ತೆರಿಗೆಗಳನ್ನು ಹೊರತುಪಡಿಸಿ ಸುಮಾರು ₹76,868ರಿಂದ ₹92,850ವರೆಗೆ ವೆಚ್ಚವಾಗಬಹುದು. ಈ ದರವನ್ನು ಆಧರಿಸಿದರೆ 21 ದಿನಗಳ ವಾಸ್ತವ್ಯಕ್ಕೆ ಕೊಠಡಿ ವೆಚ್ಚವೇ ಸುಮಾರು ₹16.1 ಲಕ್ಷದಿಂದ ₹19.5 ಲಕ್ಷದವರೆಗೆ ಆಗಬಹುದು. ತೆರಿಗೆಗಳು ಹಾಗೂ ಇತರ ವೆಚ್ಚಗಳನ್ನು ಸೇರಿಸಿದರೆ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಉದ್ಯೋಗಿಯೊಬ್ಬರು ಹೊಸ ನಗರಕ್ಕೆ ಸ್ಥಳಾಂತರಗೊಂಡ ಸಂದರ್ಭದಲ್ಲಿ ಕಂಪನಿಯೇ ಇಂತಹ ಐಷಾರಾಮಿ ವಾಸ್ತವ್ಯ ಕಲ್ಪಿಸಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ದಂಪತಿಯ ವಿಶಿಷ್ಟ ಅನುಭವವನ್ನು ಹಲವರು ಮೆಚ್ಚಿಕೊಂಡಿದ್ದು, ಉದ್ಯೋಗಿಗಳಿಗೆ ಕಂಪನಿಗಳು ನೀಡುವ ಸೌಲಭ್ಯಗಳ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News