ಬೆಂಗಳೂರು: ಕೆಆರ್ ಪುರಂ ಅಯ್ಯಪ್ಪ ನಗರ ಪ್ರದೇಶದಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಬರ್ತ್‌ಡೇ ನೆಪದಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಪರಾಸ್ ಎಂಬ ಯುವಕ ನೀಡಿದ ದೂರಿನಲ್ಲಿ ಪ್ರದೀಪ್ ಹಾಗೂ ಸಾಗರ್ ಸೇರಿದಂತೆ ಕೆಲ ಯುವಕರು ತನ್ನ ಸ್ನೇಹಿತನನ್ನು ಸಂಜೆ 7.30ರ ಸುಮಾರಿಗೆ ವಾಲಿಬಾಲ್ ಗ್ರೌಂಡ್‌ಗೆ ಕರೆದುಕೊಂಡು ಹೋಗಿ ಹೆಲ್ಮೆಟ್, ಚಾಕು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ವೇಳೆ ಯುವಕನ ಮೈ, ಕೈ, ಕಾಲು ಹಾಗೂ ಬೆನ್ನಿನ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವವಾಗುತ್ತಿದ್ದರೂ ಕೂಡ ಆರೋಪಿಗಳು ನಿರಂತರವಾಗಿ ದಾಳಿ ಮುಂದುವರಿಸಿದ್ದರೆಂದು ಹೇಳಲಾಗಿದೆ. ಸುಮಾರು ಅರ್ಧ ಗಂಟೆ ಕಾಲ ಹಲ್ಲೆ ನಡೆಸಿ ಘಟನೆಯ ವಿಡಿಯೋವನ್ನು ಕೂಡ ಚಿತ್ರೀಕರಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.
ಅಷ್ಟೇ ಅಲ್ಲದೆ, ಹಲ್ಲೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಬಗ್ಗೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಂದ ಮೊಬೈಲ್ ಮೂಲಕವೂ ಬೆದರಿಕೆ ಕರೆಗಳು ಬಂದಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

