Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು ಫುಟ್‌ಪಾತ್ ಒತ್ತುವರಿ ವಿರುದ್ಧ GBA ಸಮರ: ಎರಡನೇ ದಿನವೂ ಜೆಸಿಬಿ ಕಾರ್ಯಾಚರಣೆ

ಬೆಂಗಳೂರು ಫುಟ್‌ಪಾತ್ ಒತ್ತುವರಿ ವಿರುದ್ಧ GBA ಸಮರ: ಎರಡನೇ ದಿನವೂ ಜೆಸಿಬಿ ಕಾರ್ಯಾಚರಣೆ

AIN Kannada 4 months ago

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. GBA ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ರಾಜ್ಯ ಸರ್ಕಾರ ನಿನ್ನೆ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ಅದರ ಭಾಗವಾಗಿ ಇಂದು ಉತ್ತರ ವಲಯದ ಹಲವು ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಿತು.

ನಗರಾಭಿವೃದ್ಧಿ ಸಚಿವರ ಸೂಚನೆಯಂತೆ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಒತ್ತುವರಿಗಳನ್ನು ತೆರವುಗೊಳಿಸಲಾಯಿತು.

ಸಹಕಾರನಗರ ಮುಖ್ಯರಸ್ತೆ, ಕೊಡಿಗೇನಹಳ್ಳಿ, ವಿದ್ಯಾರಣ್ಯಪುರ ಮುಖ್ಯರಸ್ತೆ, ನಂಜಪ್ಪ ಸರ್ಕಲ್‌, ಪುಲಿಕೇಶಿನಗರ, ದಿನ್ನೂರು ಮುಖ್ಯರಸ್ತೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಸಮೀಪದ ಫುಟ್‌ಪಾತ್‌ಗಳಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಅತಿಕ್ರಮಣ ತೆರವುಗೊಳಿಸಲಾಯಿತು.

ಅಂಗಡಿಗಳ ಮುಂದೆ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳು, ವ್ಯಾಪಾರ ವಸ್ತುಗಳು, ಜಾಹೀರಾತು ಫಲಕಗಳು ಸೇರಿದಂತೆ ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದ್ದ ಹಲವು ಒತ್ತುವರಿಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ಕಾರ್ಯಾಚರಣೆಯ ವೇಳೆ ಕೆಲ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ, ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡರು.

ಫುಟ್‌ಪಾತ್‌ಗಳು ಪಾದಚಾರಿಗಳ ಬಳಕೆಗಾಗಿ ಮೀಸಲಾಗಿದ್ದು, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ಮಾಡಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಾಚರಣೆ ಮುಂದುವರಿಯಲಿದ್ದು, ಫುಟ್‌ಪಾತ್ ಒತ್ತುವರಿ ಮಾಡದಂತೆ ಬಿಬಿಎಂಪಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News