ಕೂದಲು ಒಬ್ಬರ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ವಿಶೇಷವಾಗಿ ಉದ್ದವಾದ, ದಪ್ಪ ಹಾಗೂ ಆರೋಗ್ಯಕರ ಕೂದಲು ಹೊಂದಬೇಕೆಂಬುದು ಬಹುತೇಕ ಮಹಿಳೆಯರ ಆಸೆ. ಇದಕ್ಕಾಗಿ ಶಾಂಪೂ, ಕಂಡೀಷನರ್, ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ತಲೆಸ್ನಾನದ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳು ಕೂದಲಿನ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು.
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸ್ನಾನದ ನೀರಿನ ತಾಪಮಾನ ಬಹಳ ಮುಖ್ಯ. ಬೇಸಿಗೆಯಲ್ಲಿ ಕೆಲವರು ತಣ್ಣೀರು ಹಾಗೂ ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರಿನಲ್ಲಿ ತಲೆಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಅತಿಯಾಗಿ ಬಿಸಿ ನೀರು ಬಳಸುವುದು ಕೂದಲಿಗೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸುತ್ತಾರೆ.
ಹೆಚ್ಚು ಬಿಸಿ ನೀರು ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲಾಂಶವನ್ನು ಕಡಿಮೆ ಮಾಡುತ್ತದೆ. ಈ ತೈಲಾಂಶವೇ ಕೂದಲು ಮತ್ತು ತಲೆಯ ಚರ್ಮವನ್ನು ರಕ್ಷಿಸುತ್ತದೆ. ಇದು ನಾಶವಾದಾಗ ತಲೆಚರ್ಮ ಒಣಗಿ ಹೊಟ್ಟು, ತುರಿಕೆ ಹಾಗೂ ಸಿಪ್ಪೆ ಸುಲಿಯುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇದರ ಪರಿಣಾಮ ಕೂದಲು ಒಣಗುವುದು, ಬಿರುಕು ಬಿಡುವುದು, ಮಧ್ಯದಲ್ಲಿ ತುಂಡಾಗುವುದು, ಸೀಳುವುದು ಹಾಗೂ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಈಗಾಗಲೇ ಕೂದಲಿಗೆ ಕಲರ್ ಮಾಡಿಸಿಕೊಂಡಿದ್ದರೆ ಬಿಸಿ ನೀರಿನ ಪರಿಣಾಮ ಮತ್ತಷ್ಟು ಹೆಚ್ಚಾಗಿ ಬಣ್ಣ ಬೇಗ ಮಾಸುವ ಸಾಧ್ಯತೆ ಇರುತ್ತದೆ.
ಇದೇ ವೇಳೆ ಬಿಸಿ ನೀರು ನೆತ್ತಿಗೆ ತಾಗುವುದರಿಂದ ಕೂದಲಿನ ಬುಡ ದುರ್ಬಲವಾಗಿ, ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ಇದರ ಜೊತೆಗೆ ತಲೆಚರ್ಮದಲ್ಲಿ ಅತಿಯಾದ ಒಣತನ ಉಂಟಾಗಿ ಕೂದಲು ನಿರ್ಜೀವವಾಗುವ ಸಾಧ್ಯತೆ ಇದೆ.
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಉಗುರು ಬೆಚ್ಚಗಿನ ನೀರು ಬಳಸುವುದು ಅತ್ಯುತ್ತಮ. ತಲೆಗೆ ಎಣ್ಣೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಉತ್ತಮ ಅಭ್ಯಾಸವಾಗಿದೆ.
ಹಾಗೆಯೇ ಶಾಂಪೂ ಬಳಸಿ ತೊಳೆದ ಬಳಿಕ ಕಂಡೀಷನರ್ ಹಾಕಿ ತಣ್ಣನೆಯ ನೀರಿನಿಂದ ತೊಳೆಯುವುದು ಉತ್ತಮ. ಇದು ಕೂದಲಿನ ಹೊರಪದರವನ್ನು ಮುಚ್ಚಿ ತೇವಾಂಶ ಕಾಪಾಡಲು ಸಹಾಯ ಮಾಡುತ್ತದೆ. ಇದರಿಂದ ಕೂದಲು ಮೃದುವಾಗಿದ್ದು, ಹೊಳಪು ಹೆಚ್ಚುವುದರ ಜೊತೆಗೆ ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.

