Dailyhunt Logo
  • Light mode
    Follow system
    Dark mode
    • Play Story
    • App Story
ಬ್ರಿಟನ್ ರಾಜಕೀಯದಲ್ಲಿ ಸಂಚಲನ: ಪ್ರಧಾನಿ ಕೀರ್ ಸ್ಟಾರ್ಮರ್ ನಾಳೆ ರಾಜೀನಾಮೆ!?

ಬ್ರಿಟನ್ ರಾಜಕೀಯದಲ್ಲಿ ಸಂಚಲನ: ಪ್ರಧಾನಿ ಕೀರ್ ಸ್ಟಾರ್ಮರ್ ನಾಳೆ ರಾಜೀನಾಮೆ!?

AIN Kannada 18 hrs ago

ಲಂಡನ್: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ವರದಿಗಳು ಯುಕೆಯ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಸರ್ಕಾರದ ಮೂಲಗಳು ಸ್ಟಾರ್ಮರ್ ತಮ್ಮ ಕರ್ತವ್ಯಗಳ ಮೇಲೆ ಗಮನಹರಿಸಿದ್ದಾರೆ ಎಂದು ಸ್ಪಷ್ಟಪಡಿಸಿವೆ.

ಆಡಳಿತಾರೂಢ ಲೇಬರ್ ಪಕ್ಷದೊಳಗೆ ಸ್ಟಾರ್ಮರ್ ಅವರ ನಾಯಕತ್ವದ ವಿರುದ್ಧ ಅಸಮಾಧಾನ ಹೆಚ್ಚಾಗಿದ್ದು, ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹಿನ್ನಡೆಯಿಂದ ಅವರ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿದೆ. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿಯೂ ಮತದಾರರು ದೂರ ಸರಿದಿರುವುದು ಸಂಸದರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ರಕ್ಷಣಾ ವೆಚ್ಚ ಸೇರಿದಂತೆ ಹಲವು ನೀತಿಗಳ ಬಗ್ಗೆ ಸರ್ಕಾರದ ನಿಲುವನ್ನು ವಿರೋಧಿಸಿ ಕೆಲವು ಪ್ರಮುಖ ಸಚಿವರು ಮತ್ತು ಅಧಿಕಾರಿಗಳು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳಿಂದ ಸರ್ಕಾರ ಹಿಂದೆ ಸರಿದಿದೆ ಎಂಬ ಆರೋಪವೂ ಸ್ಟಾರ್ಮರ್ ವಿರುದ್ಧ ಕೇಳಿಬರುತ್ತಿದೆ.

ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿದ ವಿಚಾರವೂ ಸ್ಟಾರ್ಮರ್ ಸರ್ಕಾರಕ್ಕೆ ತೀವ್ರ ಟೀಕೆಗೆ ಕಾರಣವಾಗಿದೆ. ಈ ನೇಮಕಾತಿ ಸಂಬಂಧವೂ ಸರ್ಕಾರದ ನಿರ್ಧಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಯುಕೆ ಮಾಧ್ಯಮಗಳ ವರದಿಗಳ ಪ್ರಕಾರ, ಸ್ಟಾರ್ಮರ್ ಅವರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಮತ್ತು ನಾಯಕತ್ವದ ಭವಿಷ್ಯ ಕುರಿತು ಶೀಘ್ರದಲ್ಲೇ ಪ್ರಕಟಣೆ ನೀಡುವ ಸಾಧ್ಯತೆ ಇದೆ. ಅವರ ಉತ್ತರಾಧಿಕಾರಿಯಾಗಿ ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಹಾಗೂ ಲೇಬರ್ ಪಕ್ಷದ ಹಿರಿಯ ನಾಯಕ ಆಂಡಿ ಬರ್ನ್ಹ್ಯಾಮ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಕೀರ್ ಸ್ಟಾರ್ಮರ್ ಅವರು 2024ರ ಜುಲೈನಲ್ಲಿ ಭಾರಿ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಕೇವಲ ಎರಡು ವರ್ಷಗಳಲ್ಲೇ ತಮ್ಮದೇ ಪಕ್ಷದೊಳಗಿನ ಅಸಮಾಧಾನದಿಂದ ರಾಜಕೀಯವಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News