Dailyhunt Logo
  • Light mode
    Follow system
    Dark mode
    • Play Story
    • App Story
ಚಲಿಸುತ್ತಿದ್ದ ವಾಹನಗಳ ಟಯರ್‌ಗೆ ಬೆಂಕಿ..! ಹಾಸನದಲ್ಲಿ ಒಂದೇ ದಿನ ಲಾರಿ-ಕಾರು ಭಸ್ಮ

ಚಲಿಸುತ್ತಿದ್ದ ವಾಹನಗಳ ಟಯರ್‌ಗೆ ಬೆಂಕಿ..! ಹಾಸನದಲ್ಲಿ ಒಂದೇ ದಿನ ಲಾರಿ-ಕಾರು ಭಸ್ಮ

AIN Kannada 3 months ago

ಹಾಸನ: ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಚಲಿಸುತ್ತಿದ್ದ ವಾಹನಗಳ ಟಯರ್‌ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಹಾಗೂ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪ್ರಯಾಣಿಕರು ಮತ್ತು ಚಾಲಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಆತಂಕ ಮೂಡಿಸಿದೆ.

ಮೊದಲ ಘಟನೆ ಬೇಲೂರು ತಾಲೂಕಿನ ಹಳೇಬೀಡು ಸಮೀಪ ನಡೆದಿದೆ. ಮಂಗಳೂರಿನಿಂದ ಹಿರಿಯೂರು ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಚಲಿಸುತ್ತಿರುವಾಗಲೇ ಟಯರ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಕೂಡಲೇ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಚಾಲಕ ಮತ್ತು ಕ್ಲೀನರ್ ಇಬ್ಬರೂ ಕೆಳಗಿಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಲಾರಿಗೆ ವ್ಯಾಪಿಸಿ ವಾಹನ ಬಹುತೇಕ ಸುಟ್ಟು ಕರಕಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರೂ, ಅಷ್ಟರಲ್ಲಾಗಲೇ ಲಾರಿಗೆ ಭಾರೀ ಹಾನಿಯಾಗಿತ್ತು. ಹಳೇಬೀಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನೊಂದು ಘಟನೆ ರಾಷ್ಟ್ರೀಯ ಹೆದ್ದಾರಿ-75ರ ಚನ್ನರಾಯಪಟ್ಟಣ-ಹಾಸನ ಮಾರ್ಗದ ಉದಯಪುರ ಸಮೀಪದ ಕತ್ತರಿಘಟ್ಟ ಬಳಿ ನಡೆದಿದೆ. ಚಲಿಸುತ್ತಿದ್ದ ಡಸ್ಟರ್ ಕಾರಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗೆ ಇಳಿದಿದ್ದಾರೆ. ಅಗ್ನಿಶಾಮಕ ವಾಹನಕ್ಕೆ ಮಾಹಿತಿ ನೀಡಲಾಗಿದ್ದರೂ, ಸಿಬ್ಬಂದಿ ಬರುವಷ್ಟರಲ್ಲಿ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಾರಿಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ಕಳೆದ ಎರಡು ತಿಂಗಳಲ್ಲಿ ಟಯರ್‌ಗೆ ಬೆಂಕಿ ಹೊತ್ತಿಕೊಂಡು ವಾಹನ ಸುಟ್ಟಿರುವ ಇದು ಎರಡನೇ ಪ್ರಕರಣವಾಗಿರುವುದು ಆತಂಕ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಹಾಸನದ ಶಾಂತಿಗ್ರಾಮ ಸಮೀಪ ಖಾಸಗಿ ಬಸ್ ಟಯರ್‌ಗೆ ಬೆಂಕಿ ಹೊತ್ತಿಕೊಂಡು ಬಸ್ ಸುಟ್ಟು ಕರಕಲಾಗಿತ್ತು. ಇದೀಗ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ವಾಹನಗಳ ತಾಂತ್ರಿಕ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಈ ಸಂಬಂಧ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News