Dailyhunt Logo
  • Light mode
    Follow system
    Dark mode
    • Play Story
    • App Story
ಚಿತ್ರದುರ್ಗದಲ್ಲಿ ಕೇಬಲ್ ಕಳ್ಳರ ಹಾವಳಿ! ಸಂಕಷ್ಟದಲ್ಲಿ ರೈತರು, ಗ್ರಾಮಗಳಲ್ಲಿ ಆತಂಕ

ಚಿತ್ರದುರ್ಗದಲ್ಲಿ ಕೇಬಲ್ ಕಳ್ಳರ ಹಾವಳಿ! ಸಂಕಷ್ಟದಲ್ಲಿ ರೈತರು, ಗ್ರಾಮಗಳಲ್ಲಿ ಆತಂಕ

AIN Kannada 22 hrs ago

ಚಿತ್ರದುರ್ಗ: ತಾಲ್ಲೂಕಿನ ತಾಳ್ಯ ಹೋಬಳಿಯ ಉಪ್ಪರಿಗೇನಹಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಮೋಟಾರ್ ಕೇಬಲ್ ಹಾಗೂ ಸ್ಟಾರ್ಟರ್ ಬೋರ್ಡ್‌ಗಳ ಕಳ್ಳತನ ಹೆಚ್ಚಾಗಿ ನಡೆಯುತ್ತಿರುವ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ.

ಮಾಹಿತಿಯ ಪ್ರಕಾರ, ಉಪ್ಪರಿಗೇನಹಳ್ಳಿ ಗ್ರಾಮದಲ್ಲಿ 25ಕ್ಕೂ ಹೆಚ್ಚು, ಗೊಲ್ಲರಹಳ್ಳಿಯಲ್ಲಿ 40ಕ್ಕೂ ಹೆಚ್ಚು, ಕೆರೆಯಾಗಲಹಳ್ಳಿಯಲ್ಲಿ 20ಕ್ಕೂ ಹೆಚ್ಚು ಹಾಗೂ ಚೌಡಗೊಂಡನಹಳ್ಳಿಯಲ್ಲಿ 14ಕ್ಕೂ ಹೆಚ್ಚು ರೈತರ ಮೋಟಾರ್ ಕೇಬಲ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೆರೆಯಾಗಲಹಳ್ಳಿಯಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ 3 ಸ್ಟಾರ್ಟರ್ ಬೋರ್ಡ್‌ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ. ಜೊತೆಗೆ ಗೊಲ್ಲರಹಳ್ಳಿಯ ಅಂಜಿನಪ್ಪ ಅವರ ತೋಟದಿಂದ 320 ಮೀಟರ್ 4.0 mm ಕೇಬಲ್ ಹಾಗೂ ಇನ್ನಿತರ ರೈತರ ತೋಟಗಳಿಂದ ನೂರಾರು ಮೀಟರ್ ಕೇಬಲ್ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ರೈತರು ನೀರಾವರಿಗಾಗಿ ಈಗಾಗಲೇ ಹೆಚ್ಚಿನ ವೆಚ್ಚವನ್ನು ಭರಿಸುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ ಸುಮಾರು 2000 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಕೇಬಲ್ ಮತ್ತು ಸ್ಟಾರ್ಟರ್ ಕಳ್ಳತನದಿಂದ ನೀರಾವರಿ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮೋಟಾರ್ ಕೇಬಲ್ ಕಳ್ಳತನದಿಂದ ನೀರಾವರಿ ವ್ಯತ್ಯಯವಾಗುತ್ತಿದ್ದು, ಕೇವಲ 4 ಗಂಟೆಗಳ ವಿದ್ಯುತ್ ಸರಬರಾಜಿನಲ್ಲಿ 10-20 ನಿಮಿಷ ಮಾತ್ರ ನೀರು ಪಡೆಯುವ ಸ್ಥಿತಿ ಉಂಟಾಗಿದೆ ಎಂದು ರೈತರು ತಿಳಿಸಿದ್ದಾರೆ.

ಈ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಬೆಳೆ ರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News