Dailyhunt Logo
  • Light mode
    Follow system
    Dark mode
    • Play Story
    • App Story
ದರ್ಶನ್‌ಗೆ ಅಭಿಮಾನಿಗಳೇ ವಿಲನ್? ಅಂಧಾಭಿಮಾನದಿಂದ ಹೆಚ್ಚುತ್ತಿದೆಯೇ ಸಂಕಷ್ಟ!

ದರ್ಶನ್‌ಗೆ ಅಭಿಮಾನಿಗಳೇ ವಿಲನ್? ಅಂಧಾಭಿಮಾನದಿಂದ ಹೆಚ್ಚುತ್ತಿದೆಯೇ ಸಂಕಷ್ಟ!

AIN Kannada 1 week ago

ಬೆಂಗಳೂರು: ಅಭಿಮಾನಿ ಎನ್ನುವುದು ಒಬ್ಬ ನಟನಿಗೆ ಶಕ್ತಿ. ಆದರೆ ಅದೇ ಅಭಿಮಾನ ಅಂಧಾಭಿಮಾನವಾಗಿ ಬದಲಾದರೆ, ಅದು ಆ ನಟನ ಬದುಕಿನ ಮೇಲೆಯೇ ಭಾರವಾಗಬಹುದು. ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಪ್ರಕರಣದಲ್ಲಿ ಇದೇ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ದರ್ಶನ್ ಅಭಿಮಾನಿಗಳಾದ ವೇಣು, ಸುಹಾಸ್ ಹಾಗೂ ಡಿ ಕಂಪನಿ ಫ್ಯಾನ್ ಪೇಜ್ ಅಡ್ಮಿನ್ ಪುನೀತ್ ಬಂಧನವಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಪೊಲೀಸರ ತನಿಖೆಯ ಪ್ರಕಾರ, ಪ್ರಮುಖ ಸಾಕ್ಷಿ ಸಂದೀಪ್‌ಗೆ ದರ್ಶನ್ ವಿರುದ್ಧ ನ್ಯಾಯಾಲಯದಲ್ಲಿ ಹೇಳಿಕೆ ನೀಡದಂತೆ ಒತ್ತಡ ಹೇರಲಾಗಿದೆ. ಇದರಿಂದ ಸಾಕ್ಷಿಗಳಿಗೆ ಬೆದರಿಕೆ, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಯತ್ನ ಹಾಗೂ ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳು ಪ್ರಕರಣಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಎದುರಾಗಿದೆ.

ಬಂಧಿತ ಪುನೀತ್ ಇದೇ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿ. ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಲಾಗಿದೆ ಎನ್ನಲಾದ ಬಿಳಿ ಸ್ಕಾರ್ಪಿಯೋ ವಾಹನದ ಮಾಲೀಕನಾಗಿರುವ ಆತ, ಕಾನೂನಿಗೆ ಸಹಕರಿಸುವ ಬದಲು ಮತ್ತೊಬ್ಬ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾನೆ.

ಇದೇ ಮೊದಲಲ್ಲ. ಈ ಹಿಂದೆ ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ನಿಂದನೆ ಹಾಗೂ ಅತ್ಯಾಚಾರದ ಬೆದರಿಕೆ ಹಾಕಿದ ಪ್ರಕರಣದಲ್ಲೂ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಪೊಲೀಸರು ಕ್ರಮ ಕೈಗೊಂಡಿದ್ದರು.

ಕಾನೂನು ತಜ್ಞರ ಪ್ರಕಾರ, ನ್ಯಾಯಾಂಗ ವಿಚಾರಣೆಯ ಹಂತದಲ್ಲಿರುವ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಹ ಘಟನೆಗಳು ಆರೋಪಿಗಳ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ. ನಟನಿಗೆ ಬೆಂಬಲ ನೀಡುವ ಉದ್ದೇಶದಿಂದ ಅಭಿಮಾನಿಗಳು ನಡೆಸುವ ಅತಿರೇಕದ ವರ್ತನೆ ಅಂತಿಮವಾಗಿ ಆ ನಟನ ಕಾನೂನು ಹೋರಾಟವನ್ನೇ ಸಂಕಷ್ಟಕ್ಕೆ ತಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News