ನವದೆಹಲಿ: ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ದೇಶದಲ್ಲಿ ತೀವ್ರ ಮಳೆ ಕೊರತೆಯ ಆತಂಕ ಎದುರಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗಿರುವ ಪರಿಣಾಮ, ಮಳೆ ಕೊರತೆ ಗಣನೀಯವಾಗಿ ಕಡಿಮೆಯಾಗಿದ್ದು, ಇದೀಗ ಅದು ಶೇ.12ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಖಾರಿಫ್ ಹಂಗಾಮಿನ ಪ್ರಗತಿ ಹಾಗೂ ಎಲ್ ನಿನೊ ಪರಿಣಾಮದ ಕುರಿತು ಪರಿಶೀಲಿಸಲು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ ಮಳೆ, ಕೃಷಿ, ಜಲಾಶಯಗಳು ಮತ್ತು ಬೆಳೆಗಳ ಸ್ಥಿತಿಗತಿಗಳ ಕುರಿತು ಚರ್ಚಿಸಿದರು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಜೂನ್‌ನಿಂದ ಜುಲೈ 7ರವರೆಗಿನ ಮಳೆಯ ಮಾಹಿತಿ ಮಂಡಿಸಿದರು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಮುಂಗಾರು ಸುಮಾರು 10 ದಿನ ತಡವಾಗಿ ಆರಂಭವಾಗಿದ್ದರೂ, ಜುಲೈ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎಲ್ ನಿನೊ ಪ್ರಭಾವ ಮಧ್ಯಮ ದುರ್ಬಲ ಹಂತ ತಲುಪುವ ಸಾಧ್ಯತೆ ಇದ್ದು, ಇದರಿಂದ ಮುಂಗಾರು ಮಳೆಯ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು. ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಖಾರಿಫ್ ಬೆಳೆಗಳಿಗೆ ಸಂಬಂಧಿಸಿದಂತೆ ಮಳೆ, ಜಲಾಶಯಗಳ ನೀರಿನ ಸಂಗ್ರಹ, ಬಿತ್ತನೆ ಪ್ರಗತಿ, ನೀರಿನ ಲಭ್ಯತೆ, ಕೀಟ ಹಾಗೂ ರೋಗಗಳ ಮೇಲ್ವಿಚಾರಣೆಗೆ ರಾಜ್ಯಗಳೊಂದಿಗೆ ವಾರಂವಾರ ಬೆಳೆ-ಹವಾಮಾನ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ತ್ವರಿತ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.
ಮಳೆ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ದೇಶದ 262 ಜಿಲ್ಲೆಗಳಿಗೆ ವಿಶೇಷ ಕೃಷಿ ಯೋಜನೆಗಳನ್ನು ವಿಸ್ತರಿಸಲಾಗಿದೆ. ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರಗಳಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ICAR) ಎಲ್ ನಿನೊ ಅಪಾಯ ನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

