ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಾಗಸಂದ್ರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರನ್ನು ಮುನಿರಾಜ್ (40) ಮತ್ತು ರೇಣುಕಾ (35) ಎಂದು ಗುರುತಿಸಲಾಗಿದೆ.
ದೇವನಹಳ್ಳಿಯಲ್ಲಿ ವಾಸವಾಗಿದ್ದ ಈ ದಂಪತಿ, ಅಂಬಲಗೆರೆಯಲ್ಲಿರುವ ತವರುಮನೆಗೆ ತೆರಳಿ ವಾಪಸ್ ಆಗುತ್ತಿದ್ದರು. ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ನಾಗಸಂದ್ರ ಬಳಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ರೇಣುಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುನಿರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

