ಬೆಂಗಳೂರು: ಸದಾಶಿವನಗರದ ಸ್ಯಾಂಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾಲೇಜು ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರೀತಿ ವಿಚಾರವಾಗಿ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಮನನೊಂದೇ ಈ ಕೃತ್ಯಕ್ಕೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮೃತ ವಿದ್ಯಾರ್ಥಿನಿಯನ್ನು 20 ವರ್ಷದ ತೇಜು ಎಂದು ಗುರುತಿಸಲಾಗಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನ ಸಹಪಾಠಿ ಯುವಕನೊಂದಿಗೆ ಪ್ರೀತಿಯಲ್ಲಿದ್ದ ತೇಜುಗೆ, ಈ ವಿಷಯ ತಿಳಿದ ಬಳಿಕ ಪೋಷಕರು ಇನ್ನೂ ವಯಸ್ಸು ಚಿಕ್ಕದು, ಮೊದಲು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದರು. ಇದರ ನಂತರ ಯುವಕ ತೇಜುವಿನಿಂದ ಅಂತರ ಕಾಯ್ದುಕೊಂಡಿದ್ದಾನೆ ಎನ್ನಲಾಗಿದೆ. ಇದರಿಂದ ತೇಜು ಮಾನಸಿಕವಾಗಿ ನೊಂದಿದ್ದಳು ಎಂದು ತಿಳಿದುಬಂದಿದೆ.
ಸೋಮವಾರ ಕಾಲೇಜು ಮುಗಿಸಿ ಹೊರಬಂದ ತೇಜು, ತನ್ನ ಪ್ರಿಯಕರನಿಗೆ "ನನಗೆ ಬದುಕು ಸಾಕಾಗಿದೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಸಂದೇಶ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಸಂದೇಶ ನೋಡಿದ ಯುವಕ ಅದರ ಸ್ಕ್ರೀನ್‌ಶಾಟ್ ಅನ್ನು ತೇಜು ಪೋಷಕರಿಗೆ ಕಳುಹಿಸಿ ಮಾಹಿತಿ ನೀಡಿದ್ದಾನೆ. ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಹುಡುಕಾಟ ನಡೆಸಿದಾಗ, ತೇಜು ಕೊನೆಯದಾಗಿ ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಬಂದಿರುವುದು ಪತ್ತೆಯಾಗಿದೆ. ಸಿಸಿಟಿವಿ ಹಾಗೂ ಇತರ ಮಾಹಿತಿಗಳ ಪರಿಶೀಲನೆಯಲ್ಲಿ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕೆರೆ ಬಳಿ ಬಂದಿದ್ದ ತೇಜು, ಸಂಜೆ 6 ಗಂಟೆಯವರೆಗೆ ಅಲ್ಲೇ ತಂಗಿದ್ದಳು. ಬಳಿಕ ತನ್ನ ಬ್ಯಾಗ್ ಅನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಳು.
ರಾತ್ರಿ ಪೂರ್ತಿ ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ನಡೆಸಿದ ವೇಳೆ ಸ್ಯಾಂಕಿ ಕೆರೆಯಲ್ಲಿ ತೇಜುವಿನ ಮೃತದೇಹ ಪತ್ತೆಯಾಗಿದೆ.
ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಪ್ರೀತಿ ವಿಚಾರವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

