ದೈನಂದಿನ ಬಳಕೆಯ ಚಿನ್ನದ ಆಭರಣಗಳು ಕಾಲಾನಂತರದಲ್ಲಿ ಮಸುಕಾಗಿ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಉಂಗುರ, ಸರ, ಕಿವಿಯೋಲೆಗಳಂತಹ ಆಭರಣಗಳು ಧೂಳು ಹಾಗೂ ಬೆವರಿನ ಪರಿಣಾಮದಿಂದ ಕಪ್ಪಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭಗಳಲ್ಲಿ ಜುವೆಲರಿ ಅಂಗಡಿಗೆ ಹೋಗದೇ ಮನೆಯಲ್ಲಿಯೇ ಸುಲಭವಾಗಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಅಡಿಗೆ ಸೋಡಾ ವಿಧಾನ:
ಸ್ವಲ್ಪ ಬೆಚ್ಚಗಿನ ನೀರಿನಲ್ಲಿ 2 ಟೀ ಚಮಚ ಅಡಿಗೆ ಸೋಡಾ ಬೆರೆಸಿ ಪೇಸ್ಟ್ ತಯಾರಿಸಬೇಕು. ಹಳೆಯ ಟೂತ್‌ಬ್ರಷ್ ಸಹಾಯದಿಂದ ಆಭರಣದ ಮೇಲೆ ಹಚ್ಚಿ 4-5 ನಿಮಿಷಗಳ ಕಾಲ ಇಡಬೇಕು. ನಂತರ ಶುದ್ಧ ನೀರಿನಲ್ಲಿ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿದರೆ ಚಿನ್ನದ ಹೊಳಪು ಮರಳಿ ಬರುತ್ತದೆ. ಆದರೆ ಹೆಚ್ಚು ಬಲವಾಗಿ ಉಜ್ಜಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಟೂತ್‌ಪೇಸ್ಟ್ ವಿಧಾನ:
ಬಿಳಿ ಟೂತ್‌ಪೇಸ್ಟ್ ಅನ್ನು ಮೃದುವಾದ ಬ್ರಷ್‌ಗೆ ಹಚ್ಚಿ ಆಭರಣದ ಮೇಲೆ ನಿಧಾನವಾಗಿ ಉಜ್ಜಿ. ಸುಮಾರು 5 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದು ಒಣಗಿಸಿದರೆ ಮಸುಕಾದ ಚಿನ್ನ ಮತ್ತೆ ಹೊಳೆಯುತ್ತದೆ ಎಂದು ಹೇಳಲಾಗಿದೆ.
ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ವಿಧಾನ:
ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಬೇಕು. ಇದನ್ನು ಆಭರಣದ ಮೇಲೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಬೇಕು. ನಂತರ ನೀರಿನಲ್ಲಿ ತೊಳೆದು ಒಣಗಿಸಿದರೆ ಚಿನ್ನದ ಆಭರಣಗಳು ಹೊಸದಿನಂತೆ ಹೊಳಪಾಗುತ್ತವೆ ಎಂದು ತಿಳಿಸಲಾಗಿದೆ.
ತಜ್ಞರ ಪ್ರಕಾರ, ಈ ಸರಳ ಮನೆಯ ವಿಧಾನಗಳನ್ನು ಬಳಸಿ ಚಿನ್ನದ ಆಭರಣಗಳ ಹೊಳಪು ಹೆಚ್ಚಿಸಬಹುದಾಗಿದ್ದು, ನಿಯಮಿತ ಸ್ವಚ್ಛತೆ ಮಾಡಿದರೆ ಆಭರಣಗಳು ಹೆಚ್ಚು ಕಾಲ ಹೊಸದಿನಂತೆ ಕಾಣುತ್ತವೆ.

