ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವಿನ ವೈವಾಹಿಕ ಬಿಕ್ಕಟ್ಟಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಸುನೀತಾ ಅಹುಜಾ ಫ್ಯಾಮಿಲಿ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 19ರಂದು ಪುತ್ರ ಯಶವರ್ಧನ್ ಅಹುಜಾ ಹಾಗೂ ವಕೀಲರೊಂದಿಗೆ ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡಿದ್ದ ಸುನೀತಾ, ಕಾನೂನು ಪ್ರಕ್ರಿಯೆಯನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ.
ಈ ಬೆಳವಣಿಗೆಯನ್ನು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಸ್ವಾಗತಿಸಿದ್ದಾರೆ. ಪ್ರಕರಣ ಹಿಂಪಡೆಯಲಾಗಿರುವುದು ಸಂತಸದ ಸಂಗತಿ. ಆದರೆ ಕುಟುಂಬದ ವೈಯಕ್ತಿಕ ವಿಚಾರ ಇಷ್ಟು ದೊಡ್ಡ ಮಟ್ಟದಲ್ಲಿ ಸಾರ್ವಜನಿಕವಾಗಬೇಕಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಇಂತಹ ಸಮಸ್ಯೆಗಳನ್ನು ಕುಟುಂಬದೊಳಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ಕೋರ್ಟ್ ಹಾಗೂ ಮಾಧ್ಯಮಗಳ ಮುಂದೆ ವಿಚಾರವನ್ನು ಎಳೆದುಕೊಂಡು ಹೋಗಿ ಬಳಿಕ ಅರ್ಜಿ ಹಿಂಪಡೆಯುವುದರಿಂದ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಶಶಿ ಸಿನ್ಹಾ ಹೇಳಿದ್ದಾರೆ. ಗೋವಿಂದ ಈ ಬೆಳವಣಿಗೆ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚೆಗೆ ಗೋವಿಂದ ಹಾಗೂ 'ರೂಪಾ' ಚಿತ್ರದ ನಟಿ ಕೋಮಲ್ ರಾಣಿ ನಡುವಿನ ಆಪ್ತತೆಯ ಕುರಿತ ವದಂತಿಗಳು ದಂಪತಿಯ ನಡುವಿನ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದ್ದವು. ಇಬ್ಬರೂ ಏರ್‌ಪೋರ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಕ್ಕೆ ಸುನೀತಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಗೋವಿಂದ ಕೂಡ ಪತ್ನಿಯ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ತಮ್ಮ ಹೆಸರಿಗೆ ಧಕ್ಕೆ ತರುವ ಹಾಗೂ ಹೊಸ ಸಿನಿಮಾದ ಕಂಬ್ಯಾಕ್‌ಗೆ ಅಡ್ಡಿಪಡಿಸುವ ರೀತಿಯ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದರು. ಇದೀಗ ವಿಚ್ಛೇದನ ಅರ್ಜಿ ಹಿಂಪಡೆಯುವ ಮೂಲಕ ದಂಪತಿಯ ನಡುವಿನ ಕೌಟುಂಬಿಕ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

