Dailyhunt Logo
  • Light mode
    Follow system
    Dark mode
    • Play Story
    • App Story
ಗ್ರೇಟರ್ ಬೆಂಗಳೂರು SIR ವಿವಾದ: ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಗ್ರೇಟರ್ ಬೆಂಗಳೂರು SIR ವಿವಾದ: ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

AIN Kannada 5 days ago

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಪರ್ಯಾಯ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ನಡೆಸಲು ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದೆ.

ಜಿಬಿಎ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಪರ್ಯಾಯ ಎಸ್‌ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗವು ಜೂನ್ 19ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಎಂ. ವಿವೇಕ್ ಸೇರಿದಂತೆ ಐವರು ಅರ್ಜಿದಾರರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಅರ್ಜಿದಾರರ ವಾದದ ಪ್ರಕಾರ, ಕೇಂದ್ರ ಚುನಾವಣಾ ಆಯೋಗವು 2025ರ ಅಕ್ಟೋಬರ್ 27ರಂದು ಎಸ್‌ಐಆರ್ ಪ್ರಕ್ರಿಯೆ ಘೋಷಿಸಿತ್ತು. ಅದರಂತೆ 2026ರ ಜೂನ್ 16ರಂದು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಫ್ರೀಜ್ ಮಾಡಲಾಗಿತ್ತು. ಇದಾದ ಕೇವಲ ಮೂರು ದಿನಗಳ ಬಳಿಕ, ಜೂನ್ 19ರಂದು ರಾಜ್ಯ ಚುನಾವಣಾ ಆಯೋಗ ಜಿಬಿಎ ವ್ಯಾಪ್ತಿಯ ಕೆಲವು ವಾರ್ಡ್‌ಗಳ ಮತದಾರರ ಪಟ್ಟಿಯ ಪರಿಷ್ಕರಣೆಗೆ ಪ್ರತ್ಯೇಕ ಆದೇಶ ಹೊರಡಿಸಿತ್ತು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 26ರಿಂದ ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ಆರಂಭವಾಗಿರುವ ಸಂದರ್ಭದಲ್ಲಿ, ಅದೇ ಅವಧಿಯಲ್ಲಿ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕ ಎಸ್‌ಐಆರ್ ನಡೆಸುತ್ತಿರುವುದು ಮತದಾರರಲ್ಲಿ ಗೊಂದಲ ಉಂಟುಮಾಡುತ್ತಿದೆ. ಅಲ್ಲದೆ, ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೂ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜೂನ್ 19ರಂದು ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಹಾಗೂ ಪರ್ಯಾಯ ಎಸ್‌ಐಆರ್ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News