ರಾಮನಗರ/ಯಾದಗಿರಿ, ಜು.2: ರಾಮನಗರ ಜಿಲ್ಲೆಯ ಮಾದಪಟ್ಟಣ ಸಮೀಪದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತ ದುರಂತದಲ್ಲಿ ಯಾದಗಿರಿ ಜಿಲ್ಲೆಯ ವಲಸೆ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಮೃತ ಕಾರ್ಮಿಕನನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಡಿಹಾಳ ದೇವಸು ನಾಯಕ ತಾಂಡಾದ ನಿವಾಸಿ ರಾಮು ನಾಯಕ (45) ಎಂದು ಗುರುತಿಸಲಾಗಿದೆ.
ಕುಟುಂಬದ ಜೀವನೋಪಾಯಕ್ಕಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದ ರಾಮು ನಾಯಕ, ಮಾದಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಿಹಾರ ಮೂಲದ ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಕೆಲಸದ ವೇಳೆ ಏಕಾಏಕಿ ಬೃಹತ್ ಬಂಡೆ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಹೊಟ್ಟೆಪಾಡಿಗಾಗಿ ರಾಜ್ಯದ ಮತ್ತೊಂದು ಭಾಗಕ್ಕೆ ವಲಸೆ ಬಂದಿದ್ದ ಕಾರ್ಮಿಕನ ಜೀವ ಕ್ವಾರಿಯಲ್ಲೇ ಕೊನೆಗೊಂಡಿದ್ದು, ಈ ದುರಂತ ವಲಸೆ ಕಾರ್ಮಿಕರ ಸುರಕ್ಷತೆ ಕುರಿತ ಪ್ರಶ್ನೆಗಳನ್ನು ಮತ್ತೊಮ್ಮೆ ಎತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

