ಐಪಿಎಲ್ 2026ರಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಇದೀಗ ಕಾರ್ಪೊರೇಟ್ ವಲಯದಲ್ಲೂ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. ಮೈದಾನದಲ್ಲಿ ರನ್ ಮಳೆ ಸುರಿಸಿದ ಈ 15 ವರ್ಷದ ಪ್ರತಿಭಾವಂತ ಆಟಗಾರನನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲು ಹಲವು ಪ್ರಮುಖ ಕಂಪನಿಗಳು ಆಸಕ್ತಿ ತೋರಿವೆ.
ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ವೈಭವ್ ಅವರ ಬ್ರಾಂಡ್ ಮೌಲ್ಯ ಗಣನೀಯವಾಗಿ ಏರಿಕೆಯಾಗಿದ್ದು, ಕ್ರೀಡಾ ಪಾನೀಯಗಳು, ಪೌಷ್ಠಿಕಾಂಶ ಉತ್ಪನ್ನಗಳು ಹಾಗೂ ಪ್ರಮುಖ ಫುಟ್‌ವೇರ್ ಕಂಪನಿಗಳು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ದೀರ್ಘ ಭವಿಷ್ಯದ ಮೇಲೆ ಕಂಪನಿಗಳ ಕಣ್ಣು
ಕೇವಲ 15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿಗೆ ಇನ್ನೂ ದೀರ್ಘ ಕ್ರಿಕೆಟ್ ವೃತ್ತಿಜೀವನವಿರುವ ಕಾರಣ, ಕಂಪನಿಗಳು ಅವರನ್ನು ಭವಿಷ್ಯದ ಹೂಡಿಕೆ ಎಂದು ಪರಿಗಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಹುತೇಕ ಸಂಸ್ಥೆಗಳು ಎರಡು ರಿಂದ ಮೂರು ವರ್ಷಗಳ ಅವಧಿಯ ಒಪ್ಪಂದಗಳಿಗೆ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಪ್ರದರ್ಶನ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಒಪ್ಪಂದ ವಿಸ್ತರಿಸುವ ಯೋಜನೆಯಲ್ಲಿವೆ.
ವೈಭವ್ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಅವರ ಪರವಾಗಿ ಕುಟುಂಬ ಸದಸ್ಯರೇ ಜಾಹೀರಾತು ಮತ್ತು ವ್ಯವಹಾರಿಕ ಒಪ್ಪಂದಗಳ ಪ್ರಕ್ರಿಯೆ ನಡೆಸುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯೂ ಈ ಎಲ್ಲಾ ಒಪ್ಪಂದಗಳಿಗೆ ಸಂಬಂಧಿಸಿದಂತೆ ಕಾನೂನು ಹಾಗೂ ವೃತ್ತಿಪರ ಸಲಹೆಗಳನ್ನು ನೀಡುತ್ತಿರುವುದಾಗಿ ತಿಳಿದುಬಂದಿದೆ.
1 ಕೋಟಿಯಿಂದ 2 ಕೋಟಿಗೆ ಏರಿದ ಜಾಹೀರಾತು ಶುಲ್ಕ
ವೈಭವ್ ಸೂರ್ಯವಂಶಿ ಈಗಾಗಲೇ ಹಲವು ಪ್ರಮುಖ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಒಂದು ಜಾಹೀರಾತಿಗೆ ಸುಮಾರು 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ಅವರು, ಬಳಿಕ 1.5 ಕೋಟಿ ರೂ.ಗೆ ಏರಿಕೆ ಕಂಡಿದ್ದರು.
ಆದರೆ ಐಪಿಎಲ್ 2026ರ ಅದ್ಭುತ ಪ್ರದರ್ಶನದ ಬಳಿಕ ಅವರ ಜಾಹೀರಾತು ಮೌಲ್ಯ ಮತ್ತಷ್ಟು ಹೆಚ್ಚಳಗೊಂಡಿದ್ದು, ಇದೀಗ ಪ್ರತಿ ಬ್ರಾಂಡ್ ಒಪ್ಪಂದಕ್ಕೆ ಸುಮಾರು 2 ಕೋಟಿ ರೂ.ವರೆಗೆ ಸಂಭಾವನೆ ಪಡೆಯುವ ಮಟ್ಟಕ್ಕೆ ಏರಿದ್ದಾರೆ ಎನ್ನಲಾಗಿದೆ.
ಐಪಿಎಲ್‌ನಲ್ಲಿ ದಾಖಲೆಗಳ ಸರಮಾಲೆ
ರಾಜಸ್ಥಾನ್ ರಾಯಲ್ಸ್ ತಂಡದ ಪರ ಈ ಋತುವಿನಲ್ಲಿ ವೈಭವ್ ಸೂರ್ಯವಂಶಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. 16 ಪಂದ್ಯಗಳಲ್ಲಿ 237.37ರ ಸ್ಟ್ರೈಕ್ ರೇಟ್‌ನೊಂದಿಗೆ 776 ರನ್‌ಗಳನ್ನು ಸಿಡಿಸಿ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಕೇವಲ 15ನೇ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿರುವ ಅವರು, ಪವರ್‌ಪ್ಲೇ ಓವರ್‌ಗಳಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಮೈದಾನದಲ್ಲಿ ಬ್ಯಾಟ್ ಮೂಲಕ ದಾಖಲೆಗಳನ್ನು ಬರೆಯುತ್ತಿರುವ ವೈಭವ್ ಸೂರ್ಯವಂಶಿ, ಇದೀಗ ಜಾಹೀರಾತು ಲೋಕದಲ್ಲೂ ಕೋಟಿ ಕೋಟಿ ರೂಪಾಯಿಗಳ ಬ್ರಾಂಡ್ ಒಪ್ಪಂದಗಳ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರದ ಹೊಸ ತಾರೆ ಆಗಿ ಮಿಂಚುತ್ತಿದ್ದಾರೆ.

