ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ದಿನದಿಂದ ದಿನಕ್ಕೆ ಹೈಪ್ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಚಿತ್ರದ ಬಗ್ಗೆ ಹೊರಬಿದ್ದ ಹೊಸ ಸುದ್ದಿ ಸಿನಿಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಾಲಿವುಡ್ ಮೂಲಗಳ ಪ್ರಕಾರ, 'ಜೈಲರ್ 2' ಚಿತ್ರದ ವಿಶೇಷ ಅತಿಥಿ ಪಾತ್ರಕ್ಕಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಆರಂಭದಲ್ಲಿ ಈ ಪಾತ್ರಕ್ಕಾಗಿ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ 'ಕಿಂಗ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ಶಾರುಖ್ ಈ ಆಫರ್ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಹೃತಿಕ್ ರೋಷನ್ ಅವರನ್ನು ಈ ಪವರ್‌ಫುಲ್ ಪಾತ್ರಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.
ಚಿತ್ರದಲ್ಲಿ ರಜನಿಕಾಂತ್ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಂತೆ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇನ್ನು ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಹಾಗೂ ಸೂರಜ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದ ಬಿಡುಗಡೆಯ ದಿನಾಂಕ ಇನ್ನೂ ಅಧಿಕೃತವಾಗಿಲ್ಲ. ಆದರೆ ಇದೇ ವರ್ಷ ಸೆಪ್ಟೆಂಬರ್ 11ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

