ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಬಿಡುಗಡೆಯಾಗುವ ಮುನ್ನವೇ ಆನ್‌ಲೈನ್‌ನಲ್ಲಿ 1.2 ಕೋಟಿ ಮಂದಿ ವೀಕ್ಷಿಸಿರುವುದಾಗಿ ತಮಿಳುನಾಡು ಸರ್ಕಾರ ಚೆನ್ನೈ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಇದೇ ವೇಳೆ ಸಿನಿಮಾ ಸೋರಿಕೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
4ನೇ ಆರೋಪಿ ಎಸ್. ರಜಿನಿ ಹಾಗೂ 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಕುಮಾರಪ್ಪನ್, ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲು ನಿರಾಕರಿಸಿದರು.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು, ಸಿನಿಮಾ ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಮೊದಲೇ ಇಡೀ ಚಿತ್ರ ಆನ್‌ಲೈನ್‌ಗೆ ಸೋರಿಕೆಯಾಗಿದ್ದು, ತಮಿಳು ರಾಕರ್ಸ್ ಸೇರಿದಂತೆ ಹಲವು ಪೈರಸಿ ವೆಬ್‌ಸೈಟ್‌ಗಳಲ್ಲಿ ಹರಿದಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಧಿಕೃತ ತಡೆ ಆದೇಶ ಜಾರಿಗೆ ಬರುವಷ್ಟರಲ್ಲಿ ಸುಮಾರು 1.2 ಕೋಟಿ ಮಂದಿ ಸಿನಿಮಾ ವೀಕ್ಷಿಸಿದ್ದು, ನಿರ್ಮಾಣ ಸಂಸ್ಥೆಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ವಾದಿಸಿದರು.
ಆರೋಪಿಗಳಿಗೆ ಜಾಮೀನು ನೀಡಿದರೆ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತು. ಪ್ರಕರಣದಲ್ಲಿ ಈಗಾಗಲೇ 21 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಸರ್ಕಾರಿ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

