Dailyhunt Logo
  • Light mode
    Follow system
    Dark mode
    • Play Story
    • App Story
ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಉದ್ಯಮಿ ಬಲಿ: ತನಿಖೆಯಲ್ಲಿ ಬಯಲಾಯ್ತು ಸತ್ಯ!

ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಉದ್ಯಮಿ ಬಲಿ: ತನಿಖೆಯಲ್ಲಿ ಬಯಲಾಯ್ತು ಸತ್ಯ!

AIN Kannada 2 days ago

ರಾಮನಗರ: ಕಾಡಾನೆ ಜೊತೆ ಸೆಲ್ಫಿ ತೆಗೆಯುವ ಯತ್ನವೇ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೀವ ಬಲಿಯಾಗಲು ಕಾರಣವಾಗಿದೆ. ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದ ಈ ದುರಂತ ಪ್ರಕರಣದಲ್ಲಿ, ಆರಂಭದಲ್ಲಿ ಸ್ನೇಹಿತರು ನೀಡಿದ್ದ ಮಾಹಿತಿ ಸುಳ್ಳು ಎಂದು ಅರಣ್ಯ ಇಲಾಖೆ ತನಿಖೆಯಿಂದ ಬಹಿರಂಗವಾಗಿದೆ.

ಮೃತರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ 52 ವರ್ಷದ ಉದ್ಯಮಿ ನರೇಂದ್ರ ಶಿಂಧೆ ಎಂದು ಗುರುತಿಸಲಾಗಿದೆ. ಅವರು ತಮ್ಮ 10 ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದು, ಹಿಂದಿರುಗುವ ವೇಳೆ ಸೋಮವಾರ ಮುಂಜಾನೆ ಸುಮಾರು 1.30ಕ್ಕೆ ಬಸವನಬೆಟ್ಟ ಸಮೀಪದ ಕರಬಗೆರೆ ಕೆರೆಯ ಬಳಿ ಈ ಘಟನೆ ನಡೆದಿದೆ.

ಮೊದಲಿಗೆ ಶಿಂಧೆ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾಗ ಕಾಡಾನೆ ಹಠಾತ್ ದಾಳಿ ನಡೆಸಿದೆ ಎಂದು ಸ್ನೇಹಿತರು ಹೇಳಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ.

ಅಧಿಕಾರಿಗಳ ತನಿಖೆ ಪ್ರಕಾರ, ಕೆರೆಯ ಬಳಿ ನಿಂತಿದ್ದ ಕಾಡಾನೆಯೊಂದಿಗೆ ಸೆಲ್ಫಿ ಅಥವಾ ಫೋಟೊ ತೆಗೆಯಲು ಶಿಂಧೆ ಕಾರಿನಿಂದ ಇಳಿದಿದ್ದರು. ಆನೆಯತ್ತ ಬೆನ್ನು ಮಾಡಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ದಂತಗಳು ಸೊಂಟ ಹಾಗೂ ಬೆನ್ನಿಗೆ ತಾಕಿದ ಪರಿಣಾಮ ಅವರು ತಪ್ಪಿಸಿಕೊಳ್ಳಲು ಯತ್ನಿಸಿ ಸಮೀಪದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಆನೆ ದಾಳಿ ನಡೆಸಿದ ಕ್ಷಣದಿಂದ ಕೇವಲ ಮೂರರಿಂದ ಐದು ಸೆಕೆಂಡುಗಳೊಳಗೆ ಘಟನೆ ನಡೆದಿರಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಬಳಿಕ ಸ್ನೇಹಿತರು ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದು ಬೆಂಗಳೂರಿಗೆ ಕೊಂಡೊಯ್ಯಲು ಪ್ರಯತ್ನಿಸಿದ್ದರು. ಆದರೆ ಅರಣ್ಯ ಸಿಬ್ಬಂದಿ ಗೇಟ್‌ನಲ್ಲಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಅವರ ಪ್ರಕಾರ, ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ದೂರವಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಆನೆ ದಾಳಿ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಶಿಂಧೆ ಅವರಿಗೆ ಯಾವುದೇ ಅವಕಾಶ ಇರಲಿಲ್ಲ ಎಂದು ತಿಳಿಸಿದ್ದಾರೆ.

ಕಾಡಾನೆ ಜೊತೆ ಸೆಲ್ಫಿ ತೆಗೆಯುವ ಯತ್ನದ ವೇಳೆ ಸಂಭವಿಸಿದ ಮೊದಲ ಸಾವು ಇದಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದ್ದು, ವನ್ಯಜೀವಿಗಳ ಸಮೀಪ ಹೋಗಿ ಫೋಟೊ ಅಥವಾ ಸೆಲ್ಫಿ ತೆಗೆಯಲು ಯತ್ನಿಸಬಾರದು ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News