ಮುಂಬೈ: ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ನಾಲ್ಕು ತಿಂಗಳ ಹಿಂದೆಯೇ ರಹಸ್ಯವಾಗಿ ವಿವಾಹವಾಗಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಯಾ ಮತ್ತು ಚೇತನ್ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರು ಎನ್ನಲಾಗಿದ್ದು, ಈ ಕುರಿತು ಪುಣೆ ಗ್ರಾಮೀಣ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮದುವೆಗೆ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಸಿಯಾ ಅವರ ಇಬ್ಬರು ಕಾಲೇಜು ಸ್ನೇಹಿತರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಆರೋಪಿಗಳಿಬ್ಬರೂ ಹೂವಿನ ಹಾರ ಧರಿಸಿರುವ ಫೋಟೋ ಒಂದು ಪೊಲೀಸರ ಕೈಗೆ ಸಿಕ್ಕಿದ್ದು, ಅದು ಮದುವೆಯ ಸಂದರ್ಭದ ಚಿತ್ರವೇ ಎಂಬುದನ್ನು ದೃಢಪಡಿಸಲು ತನಿಖೆ ನಡೆಯುತ್ತಿದೆ. ಇನ್‌ಸ್ಟಾಗ್ರಾಂ ಖಾತೆಯಿಂದ ಅಳಿಸಲಾದ ಫೋಟೋಗಳು ಮತ್ತು ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಮರುಪಡೆಯಲು ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ.
ಪ್ರಕರಣದ ಪ್ರಕಾರ, ಜೂನ್ 18ರಂದು ಲೋಹಗಡ ಕೋಟೆಯ ಎತ್ತರದ ಪ್ರದೇಶದಿಂದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಸೇರಿ ಕೇತನ್ ಅಗರ್ವಾಲ್ ಅವರನ್ನು ತಳ್ಳಿಹಾಕಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ತನಿಖೆಯಲ್ಲಿ ಇಬ್ಬರ ಪಾತ್ರವೂ ದೃಢಪಟ್ಟಿದ್ದು, ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ರಹಸ್ಯ ವಿವಾಹದ ಮಾಹಿತಿ ತನಿಖೆಗೆ ಮತ್ತಷ್ಟು ಮಹತ್ವದ ತಿರುವು ನೀಡಿದೆ.

