ಮಂಗಳೂರು: ಬಹುನಿರೀಕ್ಷಿತ 'ಕೊರಗಜ್ಜ' (Koragajja) ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸುದ್ದಿಯಲ್ಲಿದೆ. ತಾಂತ್ರಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ಸುಮಾರು ₹1.75 ಕೋಟಿ ಮೌಲ್ಯದ ಐಷಾರಾಮಿ ಫ್ಲಾಟ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಿನಿಮಾ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ನಿರ್ದೇಶಕರ ಕೊಡುಗೆಯನ್ನು ಗೌರವಿಸಿ ಈ ಉಡುಗೊರೆ ನೀಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಮೂರು ಬೆಡ್‌ರೂಮ್ ಹೊಂದಿರುವ ಈ ಫ್ಲಾಟ್‌ನ ಗೃಹ ಪ್ರವೇಶ ಹಾಗೂ ಸತ್ಯನಾರಾಯಣ ಪೂಜೆ ಇತ್ತೀಚೆಗೆ ನೆರವೇರಿತು.
ಪ್ರಸ್ತುತ ಚಿತ್ರದ 3ಡಿ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊಚ್ಚಿ ಹಾಗೂ ಚೆನ್ನೈನಲ್ಲಿ ಭರದಿಂದ ಸಾಗುತ್ತಿವೆ. ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಚಿತ್ರಕ್ಕೂ ಕಡಿಮೆಯಾಗದ ಗುಣಮಟ್ಟದಲ್ಲಿ ಸಿನಿಮಾ ಮೂಡಿಬರುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.
ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ 'ಕೊರಗಜ್ಜ' ಚಿತ್ರಕ್ಕೆ ಇದೀಗ ಅಸ್ಸಾಮಿ, ಚೈನೀಸ್ ಮತ್ತು ಇಂಗ್ಲಿಷ್ ಆವೃತ್ತಿಗಳೂ ಸೇರ್ಪಡೆಯಾಗುತ್ತಿವೆ. ಹಾಂಕಾಂಗ್ ಮತ್ತು ಬೀಜಿಂಗ್ ಮೂಲದ ವಿತರಣಾ ಸಂಸ್ಥೆಗಳು ಚಿತ್ರದ ವಿತರಣೆ ಕುರಿತು ಆಸಕ್ತಿ ತೋರಿವೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಸುಮಾರು ₹40 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

