ಲಕ್ನೋ: ಗಂಡನ ಮೇಲೆ ಆಸಿಡ್ ಎರಚಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ 1.75 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕಹಕಂಶಾ (30) ಶಿಕ್ಷೆಗೆ ಗುರಿಯಾದ ಮಹಿಳೆ. ಈಕೆ 2025ರ ಮಾರ್ಚ್ 7ರಂದು ಪತಿ ಮುಜಾಫರ್ (35) ಮಲಗಿದ್ದ ವೇಳೆ ಹತ್ಯೆ ಮಾಡುವ ಉದ್ದೇಶದಿಂದ ಅವರ ಮುಖಕ್ಕೆ ಆಸಿಡ್ ಸುರಿದಿದ್ದಳು ಎಂದು ಪ್ರಕರಣದಲ್ಲಿ ತಿಳಿದುಬಂದಿದೆ.
ಆತ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮತ್ತೆ ಮತ್ತೆ ಆಸಿಡ್ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ದಾಳಿಯಿಂದ ಮುಜಾಫರ್ ಅವರ ಮುಖ ಸಂಪೂರ್ಣವಾಗಿ ವಿರೂಪಗೊಂಡಿದ್ದು, ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಂದೌಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಗೋಪಾಲ್ ಜಿ ಅವರು ಮೇ 27ರಂದು ಕಹಕಂಶಾಳನ್ನು ದೋಷಿ ಎಂದು ಘೋಷಿಸಿದ್ದರು. ಇಂದು (ಜೂನ್ 1) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ವಿವಾಹೇತರ ಸಂಬಂಧದ ವಿಚಾರ ಹಾಗೂ ದಾಂಪತ್ಯದಲ್ಲಿನ ನಿರಂತರ ಜಗಳವೇ ಈ ದಾಳಿಗೆ ಕಾರಣವಾಗಿತ್ತು. ನಖಾಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

