ನಟಿ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಅತ್ತೆ ಹಾಗೂ ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ತಡರಾತ್ರಿ ಗಿರಿಬಾಲ ಸಿಂಗ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಬೆನ್ನಲ್ಲೇ ಗುರುವಾರ ಈ ಬಂಧನ ನಡೆದಿದೆ.
ತ್ವಿಶಾ ಶರ್ಮಾ ಅವರು ಮೇ 12ರಂದು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಮೇ 15ರಂದು ಎಫ್‌ಐಆರ್ ದಾಖಲಾಗಿತ್ತು. ಅದೇ ದಿನ ಭೋಪಾಲ್ ವಿಚಾರಣಾ ನ್ಯಾಯಾಲಯವು ಗಿರಿಬಾಲ ಸಿಂಗ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಆದರೆ, ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ, ತನಿಖೆಯಲ್ಲಿ ಸಹಕಾರದ ಕೊರತೆ, ಪ್ರಕರಣದ ಗಂಭೀರ ಸ್ವರೂಪ ಹಾಗೂ ಆರೋಪಗಳ ಪುನರಾವರ್ತನೆ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸುವಂತೆ ಆದೇಶಿಸಿದರು.
ವಿಚಾರಣಾ ನ್ಯಾಯಾಲಯವು ಸಾಕ್ಷ್ಯಗಳನ್ನು ಸಮರ್ಪಕವಾಗಿ ಪರಿಶೀಲಿಸದೇ ಜಾಮೀನು ನೀಡಿದೆ ಎಂದು ಕೂಡ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನೊಂದೆಡೆ, ನಿವೃತ್ತ ನ್ಯಾಯಾಧೀಶೆಯ ಪುತ್ರ ಸಮರ್ಥ್ ಸಿಂಗ್ ಈಗಾಗಲೇ ಸಿಬಿಐ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 80(2), 85, 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ 1961ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭೋಪಾಲ್‌ನ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಹೈಕೋರ್ಟ್ ಇದೀಗ ರದ್ದುಗೊಳಿಸಿದೆ.

