Dailyhunt
ಮಾಜಿ ಸಚಿವರ ಸಂಬಂಧಿ ಬರ್ಬರ ಹತ್ಯೆ! ಬೆಚ್ಚಿಬಿದ್ದ ಕಲಬುರಗಿ

ಮಾಜಿ ಸಚಿವರ ಸಂಬಂಧಿ ಬರ್ಬರ ಹತ್ಯೆ! ಬೆಚ್ಚಿಬಿದ್ದ ಕಲಬುರಗಿ

AIN Kannada 3 weeks ago

ಲಬುರಗಿ: ನಗರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ಫೈನಾನ್ಸ್ ಕಚೇರಿಯಲ್ಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ ಘಟನೆ ಪಿ & ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ.

ಮೃತರನ್ನು ಅನೀಲ್ ರಾಠೋಡ್ (45) ಎಂದು ಗುರುತಿಸಲಾಗಿದೆ.

ಅವರು ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಪಿ & ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಅಲ್ಲದೆ, ಅವರು ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಸಂಬಂಧಿಯಾಗಿದ್ದಾರೆ.

ಮಾಹಿತಿ ಪ್ರಕಾರ, ಏಪ್ರಿಲ್ 02ರ ರಾತ್ರಿ ಅನೀಲ್ ರಾಠೋಡ್ ತಮ್ಮ ಕಚೇರಿಯಲ್ಲಿ ಇದ್ದಾಗ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಆರಂಭಿಸಿದ್ದಾರೆ. ಈ ವಾಗ್ವಾದ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದ್ದು, ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಅನೀಲ್ ರಾಠೋಡ್ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಕಚೇರಿ ಬಾಗಿಲಿನ ಮುಂದೆಯೇ ಅವರನ್ನು ಮನಬಂದಂತೆ ಕೊಚ್ಚಿ ಹತ್ಯೆ ಮಾಡಲಾಗಿದೆ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಮೃತರ ಪೋಷಕರು, ಸಾಲ ನೀಡಿದ ಹಣವನ್ನು ವಾಪಸ್ ಕೇಳಿದ್ದಕ್ಕೆ ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅನೀಲ್ ಅವರಿಗೆ ಈ ಹಿಂದೆಯೇ ಜೀವ ಬೆದರಿಕೆ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಈ ಮಟ್ಟದ ದಾಳಿಗೆ ಒಳಗಾಗುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ.

ಹಂತಕರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News