ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಭಾರೀ ಅಬ್ಬರಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಾಣಿಜ್ಯ ನಗರಿ ಮುಂಬೈ ಸಂಪೂರ್ಣವಾಗಿ ನಲುಗಿ ಹೋಗಿದೆ. ಇವತ್ತಿನ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆ ನೀರು ರಸ್ತೆಗಳಲ್ಲೆಲ್ಲಾ ನಿಂತು ಗುಂಡಿಗಳು, ಮ್ಯಾನ್‌ಹೋಲ್ ಹಾಗೂ ಚರಂಡಿಗಳು ಉಕ್ಕಿ ಹರಿಯುತ್ತಿವೆ. ಬಲವಾದ ಗಾಳಿಯಿಂದ ಅನೇಕ ಕಡೆ ಮರಗಳು ಬುಡಮೇಲಾಗಿದ್ದು, ಹಲವು ಪ್ರದೇಶಗಳಲ್ಲಿ ವಾಹನಗಳು ನೀರಿನಲ್ಲಿ ಮುಳುಗಿದ ದೃಶ್ಯಗಳು ಕಂಡುಬಂದಿವೆ. ಪ್ರವಾಹದ ನಡುವೆಯೇ ಕೆಲವರು ರಬ್ಬರ್ ಬೋಟ್‌ಗಳ ಮೂಲಕ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ಮಳೆಯಿಂದ ಉಂಟಾದ ಅನಾಹುತದಲ್ಲಿ ಮರ ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮುಂಬೈ ಮಾತ್ರವಲ್ಲದೆ ಪುಣೆ ಮತ್ತು ಥಾಣೆ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಜು.6ರಂದು ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶಿಕ್ಷಕರ ರಕ್ಷಣೆ:
ವಸೈನಲ್ಲಿರುವ ಠಾಕೂರ್ ಕಾಲೇಜಿನಲ್ಲಿ ಸಿಲುಕಿಕೊಂಡಿದ್ದ 41 ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಸುರಕ್ಷಿತವಾಗಿ ರಕ್ಷಿಸಿವೆ.
ಪ್ರವಾಸಿಗರ ರಕ್ಷಣೆ:
ರಾಯಗಢ ಜಿಲ್ಲೆಯ ಖೋಪೋಲಿ ಬಳಿಯ ಜಿನಿತ್ ಜಲಪಾತ ನೋಡಲು ತೆರಳಿದ್ದ ಸುಮಾರು 100 ಪ್ರವಾಸಿಗರು ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಿಂದ ರಕ್ಷಿಸಲಾಗಿದೆ.
ಬುಶಿ ಡ್ಯಾಂ ಉಕ್ಕಿ ಹರಿವು:
ಲೋನಾವಾಲಾದ ಪ್ರಸಿದ್ಧ ಬುಶಿ ಡ್ಯಾಂ ನಿರಂತರ ಮಳೆಯ ಪರಿಣಾಮ ಉಕ್ಕಿ ಹರಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 114 ಮಿ.ಮೀ ಮಳೆ ದಾಖಲಾಗಿದೆ. ಈ ಪ್ರದೇಶ ಪ್ರವಾಸಿಗರಿಂದ ತುಂಬಿ ಹೋಗಿತ್ತು.
ಇದೇ ವೇಳೆ ರಾಜಮಚಿ ಕೋಟೆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಪೂರ್ಣವಾಗಿ ಕಲ್ಲು ಮತ್ತು ಮಣ್ಣಿನಿಂದ ಮುಚ್ಚಿಹೋಗಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಒಟ್ಟಿನಲ್ಲಿ ಭಾರೀ ಮಳೆಯಿಂದ ಮಹಾರಾಷ್ಟ್ರದ ಹಲವೆಡೆ ತೀವ್ರ ಹಾನಿ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.

