ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ತಾಯಿಯ ಜೊತೆ ವಾಸಿಸುತ್ತಿರುವ ಅಪ್ರಾಪ್ತ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು ಸ್ಪಷ್ಟಪಡಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚಿನ ವಿಚಾರದಲ್ಲಿ ಯಾವುದೇ ಹಣಕಾಸಿನ ಮಿತಿಯನ್ನು ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
2005ರಲ್ಲಿ ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದ್ದ ದಂಪತಿಗೆ 17 ಮತ್ತು 12 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪತ್ನಿ 2022ರಲ್ಲಿ ಭಾರತಕ್ಕೆ ಮರಳಿ ತವರು ಮನೆ ಸೇರಿದ್ದರು. ಬಳಿಕ ಮಕ್ಕಳ ಪಾಲನೆ, ಶಿಕ್ಷಣ ಹಾಗೂ ಜೀವನಾಂಶಕ್ಕಾಗಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಏಕಸದಸ್ಯ ಪೀಠ, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಶಿಕ್ಷಣ ಸಂಸ್ಥೆಗಳು ವಿಧಿಸುವ ಸಂಪೂರ್ಣ ವೆಚ್ಚವನ್ನು ತಂದೆಯೇ ನೇರವಾಗಿ ಪಾವತಿಸಬೇಕು ಎಂದು ಆದೇಶಿಸಿದೆ. ತಾಯಿ ಈಗಾಗಲೇ ಭರಿಸಿರುವ ವೆಚ್ಚವನ್ನು ದಾಖಲಾತಿಗಳ ಆಧಾರದ ಮೇಲೆ ತಂದೆಯು ಮರುಪಾವತಿಸಬೇಕು ಎಂದು ತಿಳಿಸಿದೆ.
ಇದರ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಪುಸ್ತಕಗಳು, ಯೂನಿಫಾರ್ಮ್ ಹಾಗೂ ವೈದ್ಯಕೀಯ ಖರ್ಚುಗಳನ್ನೂ ತಂದೆಯೇ ಭರಿಸಬೇಕೆಂದು ಸೂಚಿಸಿದೆ. ಪತಿಯು ಮಕ್ಕಳಿಗೆ ತಲಾ ₹15 ಸಾವಿರ ಹಾಗೂ ಪತ್ನಿಗೆ ₹40 ಸಾವಿರ ಮಾಸಿಕ ಜೀವನಾಂಶ ನೀಡಬೇಕು. ಕಾನೂನು ಹೋರಾಟದ ವೆಚ್ಚವಾಗಿ ₹25 ಸಾವಿರ ಪಾವತಿಸುವಂತೆ ನೀಡಲಾಗಿದ್ದ ಹಿಂದಿನ ಆದೇಶವನ್ನು ಮುಂದುವರಿಸಲಾಗಿದೆ.
ಪತ್ನಿ ಉನ್ನತ ವಿದ್ಯಾವಂತೆಯಾಗಿದ್ದು ಸ್ವಂತವಾಗಿ ಸಂಪಾದಿಸುವ ಸಾಮರ್ಥ್ಯ ಹೊಂದಿದ್ದಾಳೆ ಎಂಬ ಪತಿಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಮಕ್ಕಳ ಭವಿಷ್ಯ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

