ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಲಯಾಳಂ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುದೀಪ್, ಇದೀಗ ಮೊದಲ ಬಾರಿಗೆ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮಲಯಾಳಂ ಮಾಧ್ಯಮಗಳ ವರದಿಗಳ ಪ್ರಕಾರ, 'ಉಯಿರ್' ಹೆಸರಿನ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟ ರೋಷನ್ ಮ್ಯಾಥೀವ್ ನಾಯಕನಾಗಿ ಅಭಿನಯಿಸಿದ್ದು, ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿ ಬೈಜು ಸಂತೋಷ್, ಶ್ರುತಿ ಮೆನನ್, ವಿನೀತ್ ತಟ್ಟಿಲ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಕೊಲೆ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್ ತಂಡದ ಸುತ್ತ ಕಥೆ ಸಾಗಲಿದ್ದು, ಸುದೀಪ್ ಅವರ ಪಾತ್ರ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುವಂತಿದೆ ಎಂದು ವರದಿಗಳು ಹೇಳಿವೆ. ಮಲಯಾಳಂ ಚಿತ್ರರಂಗದಲ್ಲಿ ಅತಿಥಿ ಪಾತ್ರಗಳು ಅಪರೂಪವಾಗಿದ್ದರೂ, 'ಉಯಿರ್' ಚಿತ್ರದಲ್ಲಿ ಸುದೀಪ್ ಅವರ ಪಾತ್ರ ವಿಶೇಷವಾಗಿರಲಿದೆ ಎನ್ನಲಾಗುತ್ತಿದೆ.
'ಜೋಸೆಫ್' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಪದ್ಮಕುಮಾರ್ ಈ ಚಿತ್ರಕ್ಕೆ ಆಯಕ್ಷನ್-ಕಟ್ ಹೇಳಿದ್ದಾರೆ. 'ಉಯಿರ್' ಸಿನಿಮಾ ಇದೇ ಜೂನ್ 26ರಂದು ತೆರೆಗೆ ಬರಲಿದ್ದು, ಚಿತ್ರದ ಮೂಲಕ ಸುದೀಪ್ ಮಲಯಾಳಂ ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಚಿತ್ರತಂಡ ಅಥವಾ ಸುದೀಪ್ ಅವರಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಇನ್ನು ಸುದೀಪ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಿಲ್ಲಾ ರಂಗ ಭಾಷಾ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಬಳಿಕ ಕೆಆರ್‌ಜಿ ಸಂಸ್ಥೆ ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ವರದಿಗಳು ಹರಿದಾಡುತ್ತಿವೆ.
ಒಟ್ಟಿನಲ್ಲಿ, ಮಲಯಾಳಂ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಎಂಟ್ರಿ ನೀಡುತ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, 'ಉಯಿರ್' ಚಿತ್ರದ ಬಿಡುಗಡೆಯತ್ತ ಸಿನಿರಸಿಕರ ಚಿತ್ತ ನೆಟ್ಟಿದೆ.

