ಬೆಂಗಳೂರು: ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂಬ ತಮಿಳುನಾಡು ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಉಪ ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಅವರಿಗೆ ತಮಿಳುನಾಡಿಗೆ ಪಾದಯಾತ್ರೆ ನಡೆಸುವಂತೆ ಸವಾಲು ಹಾಕಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು, ಇದೀಗ ತಮ್ಮದೇ ಪಕ್ಷದ ತಮಿಳುನಾಡು ಘಟಕದ ನಾಯಕರ ಹೇಳಿಕೆ ಎದುರಾದಾಗ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
"ಚುನಾವಣೆಗೂ ಮುನ್ನ ಅಧಿಕಾರ ಪಡೆಯುವ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆಯ ನಾಟಕವಾಡಿದ್ದೀರಿ. ಈಗ ನಿಮ್ಮದೇ ಕಾಂಗ್ರೆಸ್ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು 'ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ನಿಮಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ಹಾಗೂ ಕನ್ನಡಿಗರ ಹಿತದ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಚೆನ್ನೈಗೆ ಪಾದಯಾತ್ರೆ ನಡೆಸಿ ತಮಿಳುನಾಡು ಕಾಂಗ್ರೆಸ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿ ನಿಮ್ಮ ಬದ್ಧತೆಯನ್ನು ಸಾಬೀತುಪಡಿಸಿ" ಎಂದು ಅಶೋಕ್ ಸವಾಲು ಹಾಕಿದ್ದಾರೆ.
ಇದೇ ವೇಳೆ, ಚುನಾವಣೆಯ ಸಂದರ್ಭದಲ್ಲಿ ಮತಗಳಿಗಾಗಿ ಮೇಕೆದಾಟು ವಿಚಾರವನ್ನು ಬಳಸಿಕೊಂಡ ಕಾಂಗ್ರೆಸ್, ಈಗ ತಮಿಳುನಾಡಿನ ಮೈತ್ರಿ ರಾಜಕಾರಣದ ಒತ್ತಡಕ್ಕೆ ಮಣಿದು ಮೌನ ವಹಿಸಿದೆ ಎಂದು ಅವರು ಆರೋಪಿಸಿದ್ದಾರೆ. ಕಾವೇರಿ ಕೊಳ್ಳದ ರೈತರ ಹಿತಾಸಕ್ತಿ ಹಾಗೂ ಬೆಂಗಳೂರಿನ ಜನರ ಕುಡಿಯುವ ನೀರಿನ ಅಗತ್ಯಕ್ಕಿಂತ ದೆಹಲಿ ಹೈಕಮಾಂಡ್ ಮತ್ತು ತಮಿಳುನಾಡಿನ ರಾಜಕೀಯ ಮೈತ್ರಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯೇ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿರುವ ಆರ್. ಅಶೋಕ್, ಚುನಾವಣಾ ಲಾಭಕ್ಕಾಗಿ ಮಾತ್ರ ಯೋಜನೆಯ ಹೆಸರನ್ನು ಬಳಸಿಕೊಂಡ ಕಾಂಗ್ರೆಸ್, ಈಗ ತಮಿಳುನಾಡು ಕಾಂಗ್ರೆಸ್‌ನ ಹೇಳಿಕೆಯನ್ನು ಖಂಡಿಸಲೂ ಮುಂದೆ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಜನರ ವಿಶ್ವಾಸಕ್ಕೆ ದ್ರೋಹ ಎಸಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

