ಕನ್ನಡದ 'ವಜ್ರಕಾಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ತೆಲುಗಿನ 'ಇಸ್ಮಾರ್ಟ್ ಶಂಕರ್' ಚಿತ್ರದ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದ ನಭಾ ನಟೇಶ್ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಕಾರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಭೀಕರ ಅಪಘಾತವೊಂದು ತಮ್ಮ ಬದುಕನ್ನೇ ಸಂಪೂರ್ಣ ಬದಲಿಸಿತು ಎಂದು ನಟಿ ಭಾವುಕರಾಗಿ ಹೇಳಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನಭಾ, ಮೆಟ್ಟಿಲುಗಳಿಂದ ಜಾರಿಬಿದ್ದ ವೇಳೆ ತಲೆಗೆ ಪೆಟ್ಟಾಗದಂತೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದೇಹದ ಸಂಪೂರ್ಣ ಭಾರ ಎಡ ಭುಜದ ಮೇಲೆ ಬಿದ್ದಿತ್ತು. ಪರಿಣಾಮ ಭುಜದ ಒಳಗಿನ ಮೂಳೆಗಳು ಚೂರಾಗಿದ್ದು, ಸಾಮಾನ್ಯ ಮುರಿತ ಎಂದುಕೊಂಡಿದ್ದ ಗಾಯ ದೊಡ್ಡ ಶಸ್ತ್ರಚಿಕಿತ್ಸೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ಭುಜದ ಮೂಳೆಯನ್ನು ಜೋಡಿಸಲು ವೈದ್ಯರು ಸ್ಟೀಲ್ ರಾಡ್ ಹಾಗೂ ಹಲವು ಸ್ಕ್ರೂಗಳನ್ನು ಅಳವಡಿಸಿದ್ದರು. ಗಾಯದ ಬಳಿಕ ದೀರ್ಘಕಾಲ ಬೆಡ್ ರೆಸ್ಟ್, ಫಿಸಿಯೋಥೆರಪಿ ಮತ್ತು ಚಿಕಿತ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾದ ಕಾರಣ, ಸಿನಿಮಾ ವೃತ್ತಿಜೀವನಕ್ಕೂ ಅನಿವಾರ್ಯವಾಗಿ ಬ್ರೇಕ್ ಬಿದ್ದಿತ್ತು.
ಶೂಟಿಂಗ್, ಕ್ಯಾಮೆರಾ ಮತ್ತು ನಿರಂತರ ಕೆಲಸದ ಬದುಕಿನಿಂದ ಏಕಾಏಕಿ ಹಾಸಿಗೆ ಹಿಡಿಯಬೇಕಾದ ಪರಿಸ್ಥಿತಿ ಮಾನಸಿಕವಾಗಿಯೂ ತೀವ್ರ ಒತ್ತಡ ಉಂಟುಮಾಡಿತ್ತು ಎಂದು ನಭಾ ಹೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ಶಿಲ್ಪಕಲೆ, ಪುಸ್ತಕ ಓದು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ತಮ್ಮನ್ನು ತಾವು ಮಾನಸಿಕವಾಗಿ ಪುನರ್‌ನಿರ್ಮಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ನಭಾ ನಟೇಶ್, 'ನಾಗಬಂಧಂ' ಹಾಗೂ 'ಸ್ವಯಂಭು' ಸಿನಿಮಾಗಳ ಮೂಲಕ ಭರ್ಜರಿ ಕಂಬ್ಯಾಕ್‌ಗೆ ಸಜ್ಜಾಗಿದ್ದಾರೆ.

