ಚಿಕ್ಕಮಗಳೂರು: ಮಳೆಗಾಲದ ಮಲೆನಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹಾಗೂ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಆದರೆ ಪ್ರವಾಸಿಗರ ಹೆಚ್ಚುವರಿ ದಟ್ಟಣೆ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಹೊಸ ಕಠಿಣ ನಿಯಮವನ್ನು ಜಾರಿಗೆ ತಂದಿದೆ.
ಇನ್ನು ಮುಂದೆ ಗಿರಿ ಪ್ರದೇಶಗಳಿಗೆ ಭೇಟಿ ನೀಡಲು ಪ್ರವಾಸಿಗರು ಕಡ್ಡಾಯವಾಗಿ ಆನ್‌ಲೈನ್ ಮುಂಗಡ ಬುಕಿಂಗ್ ಮಾಡಬೇಕಾಗಿದೆ. ಕನಿಷ್ಠ ಒಂದು ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡದಿದ್ದರೆ ಪ್ರವೇಶ ದ್ವಾರದಲ್ಲೇ ವಾಪಸ್ಸಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ವಾಹನ ದಟ್ಟಣೆ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಆನ್‌ಲೈನ್ ಬುಕಿಂಗ್ ಹೇಗೆ?
ಪ್ರವಾಸಿಗರು ಗೂಗಲ್‌ನಲ್ಲಿ 'Chikkamagaluru Tourism' ಎಂದು ಸರ್ಚ್ ಮಾಡಿ ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ 'Booking Mullayyanagiri' ಲಿಂಕ್ ಮೂಲಕ ಹೆಸರು, ಮೊಬೈಲ್ ಸಂಖ್ಯೆ, ವಾಹನ ವಿವರಗಳನ್ನು ನಮೂದಿಸಿ ಸ್ಲಾಟ್ ಆಯ್ಕೆ ಮಾಡಬೇಕು.
ಟಿಕೆಟ್ ದರಗಳು:
- ಬೈಕ್: ₹50
- ಕಾರು: ₹100
- ತೂಫಾನ್ ವಾಹನ: ₹150
- ಟೆಂಪೋ ಟ್ರಾವೆಲರ್: ₹200
UPI ಮೂಲಕ ಪಾವತಿ ಮಾಡಿದ ಬಳಿಕ ಟಿಕೆಟ್ ರಸೀದಿಯನ್ನು ಮೊಬೈಲ್‌ನಲ್ಲಿ ಉಳಿಸಿಕೊಂಡಿರಬೇಕು.
ಕೊನೆಯ ಕ್ಷಣದ ಟ್ರಾಫಿಕ್ ಅಥವಾ ನೆಟ್‌ವರ್ಕ್ ಸಮಸ್ಯೆ ತಪ್ಪಿಸಲು ಮುಂಚಿತ ಬುಕಿಂಗ್ ಮಾಡುವುದು ಅಗತ್ಯ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

