Dailyhunt Logo
  • Light mode
    Follow system
    Dark mode
    • Play Story
    • App Story
ಮೂರಿನಕಟ್ಟೆ ಮರುನಿರ್ಮಾಣಕ್ಕೆ ವಿರೋಧ: ಭಟ್ಕಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್!

ಮೂರಿನಕಟ್ಟೆ ಮರುನಿರ್ಮಾಣಕ್ಕೆ ವಿರೋಧ: ಭಟ್ಕಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್!

AIN Kannada 6 hrs ago

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮೂರಿನಕಟ್ಟೆ ಮರುನಿರ್ಮಾಣ ವಿಚಾರವಾಗಿ ಎರಡು ಸಮುದಾಯಗಳ ನಡುವೆ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮೇ 25ರಿಂದ 27ರವರೆಗೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿ ಭಟ್ಕಳ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ತೆರವುಗೊಳಿಸಲಾಗಿದ್ದ ಮೂರಿನಕಟ್ಟೆಯನ್ನು, ಕಾಮಗಾರಿ ಪೂರ್ಣಗೊಂಡ ಬಳಿಕ ಹಿಂದೂ ಕಾರ್ಯಕರ್ತರು ಮರುನಿರ್ಮಾಣ ಮಾಡಿದ್ದರು. ಈ ಕ್ರಮಕ್ಕೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಕಟ್ಟೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು.

ಭಾನುವಾರ ಮುಸ್ಲಿಂ ಸಮುದಾಯದ ನೂರಾರು ಮಂದಿ ವಿವಾದಿತ ಸ್ಥಳದಲ್ಲಿ ಜಮಾಯಿಸಿದ್ದು, ಮರುನಿರ್ಮಾಣಗೊಂಡಿದ್ದ ಕಟ್ಟೆಯನ್ನು ತೆರವುಗೊಳಿಸಲು ಮುಂದಾದ ವೇಳೆ ಪೊಲೀಸರು ತಡೆಯಲು ಯತ್ನಿಸಿದರು. ಈ ಸಂದರ್ಭ ಉದ್ವಿಗ್ನತೆ ತಾರಕ್ಕೇರಿ ಘರ್ಷಣೆ ಸಂಭವಿಸಿದೆ. ಕೆಲವರು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಘಟನೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆ ಹಾಗೂ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಇನ್ನೊಂದೆಡೆ, ವಿವಾದಿತ ಸ್ಥಳದಲ್ಲೇ ಮೂರಿನಕಟ್ಟೆ ಮರುನಿರ್ಮಾಣಕ್ಕೆ ಕಾರ್ಯಕರ್ತರು ಸಿದ್ಧತೆ ನಡೆಸಿದಾಗ, ಪೊಲೀಸರು ಮಧ್ಯಪ್ರವೇಶಿಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಭಟ್ಕಳ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಂಗಳೂರು ವಲಯ ಐಜಿಪಿ Amit Singh ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕ್ರಮ ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News