ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವಿಶ್ವಾಸ ಗಳಿಸಿ ನಕಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಆಗಸ್ಟ್ 3ರಂದು ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಈ ವಂಚನೆ 2025ರ ಅಕ್ಟೋಬರ್ 27ರಿಂದ ಆರಂಭವಾಗಿದೆ.
ನಿಹಾರಿಕಾ ಚೌಧರಿ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ ಮಹಿಳೆ, ತಾನು ಮೂಲತಃ ಆಂಧ್ರಪ್ರದೇಶದ ವಿಜಯವಾಡದವಳಾಗಿದ್ದು, ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿದ್ದು ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಳು.
ನಂತರ ವಿವಿಧ ವಾಟ್ಸಾಪ್ ಸಂಖ್ಯೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ದೂರುದಾರರ ವಿಶ್ವಾಸ ಗಳಿಸಿದ ಬಳಿಕ mivonexchg.com ಹಾಗೂ binzoex.com ಎಂಬ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಳು.
ಆಕೆಯ ಸೂಚನೆಯಂತೆ ದೂರುದಾರರು ವಿವಿಧ ಕ್ರಿಪ್ಟೋ ವಿನಿಮಯ ವೇದಿಕೆಗಳ ಮೂಲಕ USDT (ಟೆಥರ್) ಖರೀದಿಸಿ, ಅದನ್ನು ತಮ್ಮ ಟ್ರಸ್ಟ್ ವಾಲೆಟ್‌ಗೆ ವರ್ಗಾಯಿಸಿದ್ದರು. ಬಳಿಕ ಸುಮಾರು 30,000 USDT ಅನ್ನು ಆರೋಪಿಯು ನೀಡಿದ ವಿವಿಧ ಕ್ರಿಪ್ಟೋ ವಾಲೆಟ್ ವಿಳಾಸಗಳಿಗೆ ವರ್ಗಾಯಿಸಿದ್ದಾರೆ.
ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಯತ್ನಿಸಿದಾಗ, ತೆರಿಗೆ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಬೇಕೆಂದು ವೆಬ್‌ಸೈಟ್ ಸೂಚಿಸಿದೆ. ಅದರಂತೆ ಹೆಚ್ಚುವರಿ ಹಣ ಪಾವತಿಸಿದರೂ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರಿಂದ ತಾನು ವಂಚನೆಗೆ ಒಳಗಾಗಿರುವುದು ಅರಿತ ದೂರುದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಗುರುತಿನ ಮೂಲಕ ಪರಿಚಯ ಬೆಳೆಸಿ, ನಕಲಿ ಕ್ರಿಪ್ಟೋ ಹೂಡಿಕೆ ವೇದಿಕೆಗಳಲ್ಲಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೂಡಿಕೆ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ವಿವಿಧ ಕ್ರಿಪ್ಟೋ ವಾಲೆಟ್‌ಗಳಿಗೆ ವರ್ಗಾಯಿಸಿ ಆರ್ಥಿಕ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಎರಡೂ ವೆಬ್‌ಸೈಟ್‌ಗಳು ನಕಲಿಯಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಕುರಿತು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದೆ.

