ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ಪ್ರಮುಖ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದ ಶೆಹಜಾದ್ ಪೂನವಾಲ ಅವರು ಪಕ್ಷದ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿವಿಧ ಟಿವಿ ಚರ್ಚೆಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬಿಜೆಪಿ ಪರವಾಗಿ ಪರಿಣಾಮಕಾರಿ ವಾದ ಮಂಡಿಸುತ್ತಿದ್ದ ಅವರು, ತಮ್ಮ ಪ್ರಖರ ಭಾಷಣ ಶೈಲಿ, ಅಂಕಿ-ಅಂಶಗಳ ಆಧಾರಿತ ಪ್ರತಿಕ್ರಿಯೆಗಳು ಹಾಗೂ ವ್ಯಂಗ್ಯಮಯ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದರು.
ನೀಟ್ ಪ್ರಶ್ನೆಪತ್ರಿಕೆ ವಿವಾದ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದ ಶೆಹಜಾದ್ ಪೂನವಾಲ ಅವರ ದಿಢೀರ್ ನಿರ್ಧಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ರಾಜೀನಾಮೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಪತ್ರ ಅಥವಾ ವಿವರ ಸಾರ್ವಜನಿಕವಾಗಿಲ್ಲ.
ಲಭ್ಯವಿರುವ ಮಾಹಿತಿಯ ಪ್ರಕಾರ, ವೈಯಕ್ತಿಕ ಕಾರಣಗಳಿಂದ ಅವರು ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ನಲ್ಲೂ ಬದಲಾವಣೆ ಮಾಡಿರುವ ಅವರು, ಈ ಹಿಂದೆ ಇದ್ದ "BJP National Spokesperson" ಎಂಬ ಉಲ್ಲೇಖವನ್ನು ತೆಗೆದುಹಾಕಿದ್ದಾರೆ. ಅದರ ಬದಲಿಗೆ "ನನ್ನ ಧರ್ಮ ಮುಸ್ಲಿಂ, ಆದರೆ ನನ್ನ ಸಂಸ್ಕೃತಿ ಹಿಂದೂ" ಎಂಬ ವಾಕ್ಯವನ್ನು ಸೇರಿಸಿದ್ದಾರೆ.
ಆದಾಗ್ಯೂ, ಶೆಹಜಾದ್ ಪೂನವಾಲ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆಯೇ ಅಥವಾ ಕೇವಲ ವಕ್ತಾರ ಹುದ್ದೆಯಿಂದ ಮಾತ್ರ ಹಿಂದೆ ಸರಿದಿದ್ದಾರೆಯೇ ಎಂಬ ಕುರಿತು ಬಿಜೆಪಿ ಅಥವಾ ಅವರಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಪ್ರಕಟವಾಗಿಲ್ಲ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅವರ ಮುಂದಿನ ನಡೆ ಏನಿರಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

