ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮತ್ತು ಅದರ ಬಳಿಕ ಜಂತರ್ ಮಂತರ್‌ನಲ್ಲಿ ನಡೆದ 'ಕಾಕ್ರೋಚ್ ಜನತಾ ಪಕ್ಷ' (ಸಿಜೆಪಿ) ಪ್ರತಿಭಟನೆ ಈಗ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ವಿವಾದಾತ್ಮಕ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ 'ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ' ಹೆಸರಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಚಿತ್ರದ ಶೀರ್ಷಿಕೆಯನ್ನು ಈಗಾಗಲೇ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ.
ಜೈಪುರ ಮೂಲದ ಗೋವಿಂದ್ ದೇವ್ ಬ್ರಹ್ಮ ಈ ಮಹತ್ವಾಕಾಂಕ್ಷಿ ಯೋಜನೆಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದು, ಪ್ರತಿಭಟನೆ, ಹಗರಣ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ವ್ಯಾಪಕ ಅಧ್ಯಯನ ನಡೆಸಿದ ಬಳಿಕ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ತಿಳಿಯದ ಹಲವು ತೆರೆಮರೆಯ ಬೆಳವಣಿಗೆಗಳು, ರಾಜಕೀಯ ತಂತ್ರಗಳು ಮತ್ತು ಘಟನೆಗಳ ಒಳನೋಟವನ್ನು ಸಿನಿಮಾ ಅನಾವರಣಗೊಳಿಸಲಿದೆ ಎಂದು ಚಿತ್ರತಂಡ ಹೇಳಿದೆ.
ನೀಟ್ ಹಗರಣದ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆದ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು. ಈ ಚಳವಳಿಯ ಹಿಂದಿನ ಯೋಜನೆ, ನಿರ್ಧಾರಗಳು ಮತ್ತು ಅದರ ರಾಜಕೀಯ ಪರಿಣಾಮಗಳನ್ನೇ ಸಿನಿಮಾ ಕೇಂದ್ರಬಿಂದುವಾಗಿಸಲಿದೆ ಎನ್ನಲಾಗಿದೆ.
ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸದ್ಯ ಚಿತ್ರಕಥೆಗೆ ಅಂತಿಮ ರೂಪ ನೀಡುವ ಕೆಲಸ ನಡೆಯುತ್ತಿದೆ. ಚಿತ್ರೀಕರಣ ಸ್ಥಳಗಳ ಆಯ್ಕೆ ಪ್ರಗತಿಯಲ್ಲಿದ್ದು, ಪ್ರಮುಖ ಬಾಲಿವುಡ್ ನಿರ್ಮಾಪಕರೊಂದಿಗೆ ನಾಯಕ ನಟ ಹಾಗೂ ನಿರ್ದೇಶಕರ ಆಯ್ಕೆ ಕುರಿತ ಮಾತುಕತೆ ಅಂತಿಮ ಹಂತ ತಲುಪಿದೆ. ತಾರಾಗಣವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದ್ದು, 2027ರಲ್ಲಿ ಸಿನಿಮಾ ಬಿಡುಗಡೆಯಾಗುವ ಗುರಿ ಹೊಂದಲಾಗಿದೆ.

