Dailyhunt
ಒಳಮೀಸಲಾತಿ ಆದೇಶ ಹಿಂಪಡೆದ ಸರ್ಕಾರ: ಹೊಸ ರೋಸ್ಟರ್ ಜಾರಿಗೆ ನಿರ್ಧಾರ!

ಒಳಮೀಸಲಾತಿ ಆದೇಶ ಹಿಂಪಡೆದ ಸರ್ಕಾರ: ಹೊಸ ರೋಸ್ಟರ್ ಜಾರಿಗೆ ನಿರ್ಧಾರ!

AIN Kannada 1 week ago

ಬೆಂಗಳೂರು,: ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಏಪ್ರಿಲ್ 27ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ರೋಸ್ಟರ್ ವ್ಯವಸ್ಥೆ ಜಾರಿಗೆ ತರುವಂತೆ ತೀರ್ಮಾನಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಲಿದೆ.

ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮಹತ್ವದ ಕ್ರಮವಾಗಿ ರಾಷ್ಟ್ರೀಯ ಉಚಿತ ರೋಗ ಪತ್ತೆ ಯೋಜನೆಯಡಿ 6 MRI ಯಂತ್ರಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಾರಿಗೆ ಸಂಪರ್ಕ ಬಲಪಡಿಸುವ ನಿಟ್ಟಿನಲ್ಲಿ ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗೆ ಚರ್ಚೆ ನಡೆದಿದ್ದು, ಕರ್ನಾಟಕದಲ್ಲಿ 15 ರೈಲು ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆಗೂ ಒಪ್ಪಿಗೆ ದೊರೆತಿದೆ. ಜೊತೆಗೆ ಬೀದರ್-ಬೆಂಗಳೂರು ಹಾಗೂ ಕಲಬುರಗಿ-ಬೆಂಗಳೂರು ವಿಮಾನ ಸೇವೆಗಳಿಗೆ ವಾರ್ಷಿಕ 28.7 ಕೋಟಿ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ತೀರ್ಮಾನಿಸಿದೆ.

ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳಲ್ಲಿ 600 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಹೆಚ್ಚುವರಿ ಅನುದಾನವೂ ಮಂಜೂರಾಗಿದೆ.

ಬೃಹತ್ ಯೋಜನೆಗಳ ಪೈಕಿ ಬಿಡದಿ ಟೌನ್‌ಶಿಪ್ ಯೋಜನೆಗೆ 18,133 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ರಾಮನಗರ ಜಿಲ್ಲೆಯ 9 ಗ್ರಾಮಗಳ ವ್ಯಾಪ್ತಿಯ 7,481 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರಿಗೆ ಪ್ರತಿ ಎಕರೆಗೆ 9,600 ಚದರ ಅಡಿ ಅಭಿವೃದ್ಧಿ ಭೂಮಿ ನೀಡಲು ತೀರ್ಮಾನಿಸಲಾಗಿದೆ.

ಇದಲ್ಲದೆ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಉತ್ತೇಜನಕ್ಕಾಗಿ 8,600 ರೂ. ಮೌಲ್ಯದ ಶಾಲಾ ಕಿಟ್‌ಗಳನ್ನು ವಿತರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಇದಕ್ಕಾಗಿ 115.84 ಕೋಟಿ ರೂ. ವೆಚ್ಚವಾಗಲಿದೆ.

ಸಾರಿಗೆ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 80 ಹೊಸ ನಗರ ಬಸ್‌ಗಳನ್ನು ಖರೀದಿಸಲು 32 ಕೋಟಿ ರೂ. ಅನುಮೋದನೆ ನೀಡಲಾಗಿದೆ.

ಸೌಜನ್ಯ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕೇಳಿದರೆ ಸಂಪೂರ್ಣ ಮಾಹಿತಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News