ಬೆಂಗಳೂರು: ಜೀವನದಲ್ಲಿ ಕಷ್ಟಗಳು ಶಾಶ್ವತವಲ್ಲ ಎಂಬುದಕ್ಕೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಮನು ಅಗರವಾಲ್ ಅವರ ಬದುಕೇ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಕಾಲೇಜು ಶುಲ್ಕ ಕಟ್ಟಲು ತಾಯಿ ತಮ್ಮ ಚಿನ್ನದ ಬಳೆಗಳನ್ನು ಮಾರಬೇಕಾದ ಪರಿಸ್ಥಿತಿ ಎದುರಿಸಿದ್ದ ಕುಟುಂಬ,
ಇಂದು ಕೋಟಿ ರೂಪಾಯಿ ವಾರ್ಷಿಕ ಸಂಬಳ ಪಡೆಯುವ ಮಗನ ಸಾಧನೆಯಿಂದ ಹೆಮ್ಮೆಪಡುತ್ತಿದೆ. ಈ ಕುರಿತಾಗಿ ಮನು ಅಗರವಾಲ್ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಪೋಸ್ಟ್‌ನಲ್ಲಿ ಜೀವನದ ಕಠಿಣ ದಿನಗಳನ್ನು ನೆನಪಿಸಿಕೊಂಡಿರುವ ಮನು ಅಗರವಾಲ್, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವೇಳೆ ಒಂದು ಸೆಮಿಸ್ಟರ್‌ನ ₹15,000 ಶುಲ್ಕ ಪಾವತಿಸಲು ತಂದೆ-ತಾಯಿ ತಮ್ಮ ಚಿನ್ನದ ಒಡವೆಗಳನ್ನು ಮಾರಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
"ನನ್ನ ತಾಯಿ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಚಿನ್ನದ ಬಳೆಗಳನ್ನು ನೀಡಿದರು. ಅವರು ಕಣ್ಣೀರು ಹಾಕಲಿಲ್ಲ. ಆದರೆ ಆ ದಿನ ನಾನು ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಆ ಕ್ಷಣ ನನ್ನ ಜೀವನವನ್ನೇ ಬದಲಿಸಿತು" ಎಂದು ಅವರು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ಪೂರ್ಣಗೊಂಡ ಬಳಿಕ ಅಮೆರಿಕದ ಸಿಯಾಟಲ್‌ನಲ್ಲಿರುವ ಮೈಕ್ರೋಸಾಫ್ಟ್ ಕಚೇರಿಯಲ್ಲಿ ಉದ್ಯೋಗ ದೊರೆತಿದ್ದು, ಪ್ರಸ್ತುತ ವಾರ್ಷಿಕ ಸುಮಾರು ₹1.9 ಕೋಟಿ ಸಂಬಳ ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಉದ್ಯೋಗ ಸಿಕ್ಕ ತಕ್ಷಣ ತಾಯಿಗೆ ಕರೆ ಮಾಡಿ, "ನಿನಗೆ ಇಷ್ಟವಾದಷ್ಟು ಚಿನ್ನದ ಒಡವೆಗಳನ್ನು ಖರೀದಿಸು" ಎಂದು ಹೇಳಿದ್ದಾಗಿ ಮನು ಅಗರವಾಲ್ ತಿಳಿಸಿದ್ದಾರೆ. ಆದರೆ ಅದಕ್ಕೆ ತಾಯಿ, "ನನಗೆ ಎಲ್ಲವೂ ಮರಳಿ ಸಿಕ್ಕಿದೆ" ಎಂದು ಹೇಳಿದ ಮಾತು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಅವರು ಬರೆದುಕೊಂಡಿದ್ದಾರೆ.
"ತಂದೆ-ತಾಯಿಯ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗದ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ" ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. "ತಂದೆ-ತಾಯಿಯ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ", "ಇಂತಹ ಮಗನನ್ನು ಪಡೆದ ನಿಮ್ಮ ತಂದೆ-ತಾಯಿಯೇ ಧನ್ಯರು", "ಇದು ನಿಜಕ್ಕೂ ಸ್ಫೂರ್ತಿದಾಯಕ ಜೀವನ ಕಥೆ" ಎಂದು ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

